ಷರೀಫ್ ಎದುರೇ ಮೋದಿಗೆ ಮೆಚ್ಚುಗೆ

ವಿಜಯವಾಣಿ (1)
Published on

ಮುಜುಗರಕ್ಕೀಡಾದ ಪಾಕ್ ಪ್ರಧಾನಿ | ಅಮೆರಿಕ ಅಧ್ಯಕ್ಷರಿಂದ ಪರೋಕ್ಷ ಅವಮಾನ?

ಕೈರೋ: ಭಾರತ ನನ್ನ ಉತ್ತಮ ಸ್ನೇಹಿತ ನೇತೃತ್ವ ವಹಿಸಿರುವ ಒಂದು ಉತ್ತಮ ದೇಶ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧವನ್ನು ನಿಲ್ಲಿಸುವ ಗಾಜಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಈಜಿಪ್ಟ್ ನಲ್ಲಿ ಆಯೋಜಿಸಿದ್ದ ಗಾಜಾ ಶಾಂತಿ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ‘ಭಾರತ ನನ್ನ ಉತ್ತಮ ಸ್ನೇಹಿತನ ನೇತೃತ್ವದ ಒಂದು ಉತ್ತಮ ದೇಶ ಮತ್ತು ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ, ಬಹಳ ಚೆನ್ನಾಗಿ ಬದುಕಲಿ ಎಂದು ನಾನು ಆಶಿಸುತ್ತೇನೆ’ ಎಂದು ತಮ್ಮ ಹಿಂದೆ ನಿಂತಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್​ರತ್ತ ತಿರುಗಿ ಹೇಳಿದರು. ಇದೇ ವೇಳೆ ಗಾಜಾ ಶಾಂತಿ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಿದ ವರಿಗೆ ಧನ್ಯವಾದ ಅರ್ಪಿಸುವಾಗ ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಮತ್ತು ಪಾಕ್ ಪ್ರಧಾನಿ ಷರೀಫ್​ಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಷರೀಫ್​ಗೆ ಅವಮಾನ?: ಪಾಕ್ ಪ್ರಧಾನಿ ಷರೀಫ್​ಗೆ ಗಾಜಾ ಶಾಂತಿ ಶೃಂಗಸಭೆಯಲ್ಲಿ ಮುಜುಗರ ಉಂಟಾಗಿದೆ. ಮೊದಲಿಗೆ ಮೋದಿಯನ್ನು ಹೊಗಳಿದ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿ ಬದುಕಲಿ ಎಂದು ಆಶಿಸುವುದಾಗಿ ಷರೀಫ್​ರತ್ತ ತಿರುಗಿ ಹೇಳಿದರು. ಈ ವೇಳೆ ಯಾವ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಯದ ಷರೀಫ್ ಸುಮ್ಮನೆ ನಕ್ಕು ಸುಮ್ಮನಾದರು. ಜತೆಗೆ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಶೃಂಗಸಭೆಗೆ ಗೈರಾಗಿರುವುದನ್ನು ಉಲ್ಲೇಖಿಸಿದ ಟ್ರಂಪ್, ಆಸಿಮ್ ತಮ್ಮ ನೆಚ್ಚಿನ ಫೀಲ್ಡ್ ಮಾರ್ಷಲ್ ಎಂದು ಉದ್ದೇಶಪೂರ್ವಕವಾಗಿ ಉಲ್ಲೇಖಿಸುವ ಮೂಲಕ ಷರೀಫ್​ಗೆ ಅವಮಾನಿಸಿದರು. ಈ ಮೂಲಕ ಷರೀಫ್​ಗಿಂತ ಆಸಿಮ್ ಮುನೀರ್ ತಮಗೆ ಮುಖ್ಯ ಎಂಬುದನ್ನು ಸ್ಪಷ್ಟವಾಗಿ ಸೂಚಿಸುವ ಮೂಲಕ ಷರೀಫ್​ಗೆ ಅವಮಾನ ಮಾಡಿದ್ದಾರೆ ಎಂದು ಮಾಜಿ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಮತ್ತು ಜೆಎನ್​ಯುು ಕುಲಪತಿ ಕನ್ವಾಲ್ ಸಿಬಲ್ ವಿಶ್ಲೇಷಿಸಿದ್ದಾರೆ.

ಇದು ಯಾವ ರೀತಿಯ ಸ್ನೇಹ..?

ಅಮೆರಿಕ ಅಧ್ಯಕ್ಷ ಟ್ರಂಪ್ ಪಾಕಿಸ್ತಾನ ಪ್ರಧಾನಿ ಷರೀಫ್ ಮತ್ತು ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿದ್ದ ಸೇನಾ ಮುಖ್ಯಸ್ಥ ಮುನೀರ್​ಗಾಗಿ ಶ್ವೇತಭವನದಲ್ಲಿ ಭೋಜನ ಕೂಟ ಆಯೋಜಿಸಿದ್ದರು. ಈಗ ಈಜಿಪ್ಟ್​ನಲ್ಲಿ ಮುನೀರ್ ತಮ್ಮ ನೆಚ್ಚಿನ ಫೀಲ್ಡ್ ಮಾರ್ಷಲ್ ಎಂದು ಟ್ರಂಪ್ ಕರೆದಿದ್ದಾರೆ ಮತ್ತು ಪಾಕ್ ಪ್ರಧಾನಿಗೂ ವಿಶೇಷ ಸ್ಥಾನ ನೀಡಿದ್ದಾರೆ. ಟ್ರಂಪ್ ತಮ್ಮ ನೆಚ್ಚಿನ ಸ್ನೇಹಿತ ಎಂದು ಪ್ರಧಾನಿ ಮೋದಿ ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಟ್ರಂಪ್ ಭಾರತಕ್ಕೆ ಯಾವ ರೀತಿಯ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟ್ರಂಪ್ ಗುಣಗಾನ ಮಾಡಿದ ಷರೀಫ್

ಅಧ್ಯಕ್ಷ ಟ್ರಂಪ್​ರ ಅವಿರತ ಮತ್ತು ದಣಿವರಿಯದ ಪ್ರಯತ್ನಗಳ ಫಲವಾಗಿ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಲು ಹಾಗೂ ಕದನ ವಿರಾಮ ಘೋಷಿಸಲು ಅವರು ತಮ್ಮ ತಂಡದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅವರ ಅಸಾಧಾರಣ ಕೊಡುಗೆಗಳಿಗಾಗಿ ಪಾಕಿಸ್ತಾನವು ಟ್ರಂಪ್ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಅವರ ಪ್ರಯತ್ನದ ಫಲವಾಗಿ ದಕ್ಷಿಣ ಏಷ್ಯಾ ಮಾತ್ರಲ್ಲದೆ ಮಧ್ಯಪ್ರಾಚ್ಯದಲ್ಲೂ ಲಕ್ಷಾಂತರ ಜೀವಗಳು ಉಳಿದಿವೆ. ಮುಂದಿನ ವರ್ಷವೂ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಬಯಸುತ್ತೇನೆ ಎಂದು ಪಾಕ್ ಪ್ರಧಾನಿ ಷರೀಫ್ ಟ್ರಂಪ್​ರನ್ನು ಹೊಗಳಿದರು.

ಮೆಲೊನಿ ಸೌಂದರ್ಯ ಹೊಗಳಿದ ಟ್ರಂಪ್

ಗಾಜಾ ಶಾಂತಿ ಶೃಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೊನಿಯ ಸೌಂದರ್ಯವನ್ನು ಹೊಗಳಿದ ಟ್ರಂಪ್, ‘ನೀವು ಸುಂದರ ಮಹಿಳೆ, ನಾನು ಈ ವಿಷಯವನ್ನು ಹೇಳಲು ಅನುಮತಿ ಇಲ್ಲ. ಏಕೆಂದರೆ ಅದನ್ನು ಹೇಳಿದರೆ ಅದು ನನ್ನ ರಾಜಕೀಯ ಜೀವನದ ಅಂತ್ಯ. ಅಮೆರಿಕದಲ್ಲಿ ಮಹಿಳೆಯ ಬಗ್ಗೆ ಸುಂದರಿ ಎಂಬ ಪದ ಬಳಸಿದರೆ ಅದು ರಾಜಕೀಯ ಜೀವನದ ಅಂತ್ಯವಾಗುತ್ತದೆ. ಆದರೆ ನಾನು ಚಾನ್ಸ್ ತೆಗೆದುಕೊಳ್ಳುತ್ತೇನೆ. ನೀವು ಸುಂದರವಾಗಿದ್ದೀರಿ ಎಂದು ಕರೆಯುವುದಕ್ಕೆ ನಿಮ್ಮ ಅಭ್ಯಂತರವಿಲ್ಲವಷ್ಟೇ?’ ಎಂದರು. ಅಲ್ಲದೆ, ಅವರು ಅದ್ಭುತ ನಾಯಕಿ. ಇಟಲಿ ಜನರು ಅವರನ್ನು ನಿಜವಾಗಿಯೂ ಗೌರವಿಸುತ್ತಾರೆ, ಅವರು ಅತ್ಯಂತ ಯಶಸ್ವಿ ರಾಜಕಾರಣಿ’ ಎಂದೂ ಹೇಳಿದರು.

ಮೆಲೊನಿ ಪ್ರತಿಕ್ರಿಯೆ ವಿಡಿಯೋ ವೈರಲ್

ಪಾಕ್ ಪ್ರಧಾನಿ ಷರೀಫ್ ತಮ್ಮ ಭಾಷಣದಲ್ಲಿ ಟ್ರಂಪ್ ಅವರನ್ನು ಹೊಗಳುತ್ತಿದ್ದರು. ಈ ವೇಳೆ ಹಿಂದಿನ ಸಾಲಿನಲ್ಲಿ ನಿಂತಿದ್ದ ಮೆಲೊನಿ ಬಾಯಿಯ ಮೇಲೆ ಕೈಯಿಟ್ಟು ವಿಶಿಷ್ಠ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ‘ಷರೀಫ್ ಮಾತಿಗೆ ಮೆಲೊನಿ ಪ್ರತಿಕ್ರಿಯೆ ಹೇಗಿದೆ ನೋಡಿ? ಎಂದು ಈ ವಿಡಿಯೋ ವೈರಲ್ ಆಗಿದೆ.

ನೀವು ಧೂಮಪಾನ ಬಿಡಿ

ಶೃಂಗಸಭೆಯಲ್ಲಿ ಮೆಲೊನಿಯನ್ನು ಭೇಟಿಯಾದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೆಗನ್, ‘ನೀವು ವಿಮಾನದಿಂದ ಇಳಿದು ಬರುವಾಗ ನಾನು ನಿಮ್ಮನ್ನು ನೋಡಿದೆ. ನೀವು ತುಂಬಾ ಚೆನ್ನಾಗಿ ಕಾಣುತ್ತೀರಿ. ಆದರೆ ನೀವು ಧೂಮಪಾನ ನಿಲ್ಲಿಸುವುದು ಉತ್ತಮ’ ಎಂದು ಸಲಹೆ ನೀಡಿದ್ದಾರೆ. ಈ ಸಲಹೆ ಸ್ವೀಕರಿಸಿದ ಮೆಲೊನಿ ಮುಗುಳ್ನಗುತ್ತ ಸ್ಥಳದಿಂದ ತೆರಳಿದರು. ಆದರೆ ಪಕ್ಕದಲ್ಲೇ ಇದ್ದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ‘ಇದು ಅಸಾಧ್ಯ’ ಎಂದು ಎರ್ಡೆಗನ್​ಗೆ ಪ್ರತಿಕ್ರಿಯಿಸಿ ನಕ್ಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net