ಜನರಿಂದ ಲೋಕಸ್ಪಂದನ’ಗೆ ಮೆಚ್ಚುಗೆ; ಪೊಲೀಸ್ ಆಯುಕ್ತ ಬಿ.ದಯಾನಂದ್

B.dayanand
Published on

ಬೆಂಗಳೂರು : ಸಾರ್ವಜನಿಕರ ಜತೆಗೆ ಸೌಜನ್ಯದಿಂದ ವರ್ತಿಸಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಸೂಚಿಸಿದರು.

ಮೈಸೂರು ರಸ್ತೆ ಸಿರ್ಸಿ ಸರ್ಕಲ್‌ನಲ್ಲಿ ಇರುವ ಸಿಎಆರ್ ಕೇಂದ್ರ ಸ್ಥಾನದ ಮೈದಾನದಲ್ಲಿ ಶುಕ್ರವಾರ ನಡೆದ ಸೇವಾ ಕವಾಯತ್ತಿನಲ್ಲಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಬಿ. ದಯಾನಂದ್, ಪೊಲೀಸರು ಸಮಾಜಮುಖಿ ಕೆಲಸ ಮಾಡಬೇಕು. ಸಹಾಯ ಬೇಕಾದವರ ಬಳಿ ಸಾಧುವಾಗಿ, ಸೌಜನ್ಯದಿಂದ ಸ್ಪಂದಿಸಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮದ ಬದ್ಧತೆ ಮುಂದುವರಿಸಬೇಕು ಎಂದು ಪೊಲೀಸರಿಗೆ ಸಲಹೆ ನೀಡಿದರು.

ಪೊಲೀಸರ ನಡವಳಿಗಳ ಬಗ್ಗೆ ಜನರಲ್ಲಿ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿವೆ. ಪ್ರತಿ ತಿಂಗಳು ನಡೆಸುವ ‘ಲೋಕಸ್ಪಂದನ’ ಕಾರ್ಯಕ್ರಮದಲ್ಲಿ ಪೊಲೀಸರ ನಡವಳಿಕೆ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಜನರು ನಿರೀಕ್ಷೆಗೂ ಮೀರಿ ಸ್ಪಂದಿಸುತ್ತಿದ್ದಾರೆ. ಶೇ.60 ದೂರುದಾರರು ಪೊಲೀಸರ ಕಾರ್ಯವೈಕರಿಗೆ 5 ಶ್ರೇಯಾಂಕ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮುಂದುವರಿಸಬೇಕು. ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಗರ ಪೊಲೀಸರು ನಿರೀಕ್ಷೆಗೂ ಮೀರಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸುವುದರ ಜತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಅನುಸರಿಸುವ ಹಲವು ಸೆಕ್ಷನ್‌ಗಳನ್ನು ಬಳಸಿಕೊಂಡು ಈ ದಂಧೆ ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗಿದೆ.

ಮಾದಕ ವಸ್ತುಗಳ ಜಪ್ತಿಯ ಜತೆಗೆ ದಂಧೆಯಲ್ಲಿ ವಿದೇಶಿಗರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಪೊಲೀಸರು ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದರು.

ನಗರದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಅಪರಾಧ ಪ್ರಕರಣಗಳು ಇಳಿಕೆ ಆಗಿವೆ. ಮನೆಗಳವು, ಸರಗಳ್ಳತನದಂತಹ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಜಾಗತಿಕವಾಗಿ ಸೈಬರ್ ಕ್ರೈಂ ವೈಟ್ ಕಾಲರ್ ಅಪರಾಧಗಳು ಹೆಚ್ಚಾಗಿವೆ. ರಕ್ತರಹಿತ ಅಪರಾಧಗಳು ಕ್ಷೀಣಿಸಿವೆ. ಮುಖರಹಿತ, ಸ್ಥಳರಹಿತ, ಗಡಿರಹಿತ, ಅನಾಮಿಕ ಅಪರಾಧಗಳ ಸಂಖ್ಯೆ ಹೆಚ್ಚಾಗಿವೆ.ಇವುಗಳನ್ನು ಹತ್ತಿಕ್ಕಲು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

ಲೋಕಸ್ಪಂದನಾ ಕಾರ್ಯಕ್ರಮದಲ್ಲಿ ಪೊಲೀಸರ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳು ಬರುತ್ತಿವೆ. ಕೆಲವು ಸಂದರ್ಭಗಳಲ್ಲಿ ನಕಾರಾತ್ಮಕ ಅಂಶಗಳು ಕಂಡು ಬರುತ್ತಿವೆ. ಇಂತಹ ಸಂದರ್ಭಗಳಲ್ಲಿ ಡಿಸಿಪಿ ಮತ್ತು ಎಸಿಪಿ ಮಟ್ಟದಲ್ಲಿ ಆ ಅಧಿಕಾರಿಗಳಿಗೆ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಗಂಭೀರ ಸ್ವರೂಪದ ಆಕ್ಷೇಪಣೆಗಳಿಗೆ ಗುರಿಯಾದ ಪೊಲೀಸರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಇತ್ತೀಚೆಗೆ ಪಾಸ್‌ಪೋರ್ಟ್ ವಿಚಾರವಾಗಿ 500 ರೂ. ಲಂಚ ಪಡೆದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net