ಕುದ್ರೋಳಿ ಕ್ಷೇತ್ರಕ್ಕೆ ಪದಾಧಿಕಾರಿಗಳ ನೇಮಕ- ಹೊಸ ಸಮಿತಿಯಲ್ಲಿ ಗೊಂದಲ!
ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಸಮಿತಿ ನೂತನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಹೇಳಿದರು.
Published on:
Copied
Follow Us
ಮಂಗಳೂರು: ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಸಮಿತಿ ನೂತನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಹೇಳಿದರು.
ಫೆ.೧೬ರಂದು ಶ್ರೀ ನಾರಾಯಣಗುರು ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್ ವಾರ್ಷಿಕ ಪ್ರತಿನಿಧಿ ಸಭೆಯ ನಿರ್ಣಯದಂತೆ ೫೦ ಜನ ಸದಸ್ಯರ ಹೊಸ ಸಮಿತಿ ರಚನೆ ಮಾಡಿ ೨೦೨೬-೨೭ನೇ ಸಾಲಿನ ಆಡಳಿತ ಸಮಿತಿಗೆ ಅಧಿಕೃತವಾಗಿ ೯ ಮಂದಿಯ ಸಮಿತಿಯ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦೨೫ರ ಜೂನ್ ೨೦ರಂದು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿ ಕಾರ್ಯದರ್ಶಿ ಮಾಧವ ಸುವರ್ಣ ಅವರು ಬಿ.ಜನಾರ್ದನ ಪೂಜಾರಿ ಉಪಸ್ಥಿತಿಯಲ್ಲಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರ ಅನುಮತಿ ಇಲ್ಲದೇ ಸಭೆ ಕರೆದಿದ್ದು, ಈ ವೇಳೆ ಆಡಳಿತ ಸಮಿತಿಯ ಎಂಟು ಜನ ಸದಸ್ಯರಲ್ಲಿ ಐದು ಜನ ಸದಸ್ಯರು ಗೈರಾಗಿದ್ದರು. ಈ ಸಂದರ್ಭ ಕ್ಷೇತ್ರದ ಆಡಳಿತ ಸಮಿತಿಗೆ ಏಕಪಕ್ಷೀಯವಾಗಿ ನೂತನ ಸಮಿತಿಯ ಘೋಷಣೆ ಮಾಡಿರುವುದು ಕ್ಷೇತ್ರದ ಘನತೆಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಖಿಲಭಾರತ ಬಿಲ್ಲವ ಯೂನಿಯನ್ ಮುಖಾಂತರ ೨೦೨೬-೨೭ನೇ ಸಾಲಿಗೆ ಹೊಸ ಸಮಿತಿಯನ್ನು ಬೈಲಾ ಪ್ರಕಾರವೇ ರಚಿಸಲಾಗಿದೆ ಎಂದರು.
ಅಧ್ಯಕ್ಷರಾಗಿ ಎಚ್ ಎಸ್ ಸಾಯಿರಾಮ್, ಉಪಾಧ್ಯಕ್ಷರಾಗಿ ಊರ್ಮಿಳಾ ರಮೇಶ್ ಕುಮಾರ್, ಕಾರ್ಯದರ್ಶಿ ರವಿಶಂಕರ್ ಮಿಜಾರ್, ಖಜಾಂಚಿ ಶೇಖರ್ ಪೂಜಾರಿ, ಕಾರ್ಯಕಾರಿ ಸದಸ್ಯರಾಗಿ ಜಗದೀಪ್ ಸುವರ್ಣ, ಕೆ.ಟಿ.ಸುವರ್ಣ, ಎಚ್.ರತಿಂದ್ರನಾಥ್, ಸದಾನಂದ ಪೂಜಾರಿ ಮತ್ತು ಶರತ್ ಸುವರ್ಣ ಬಜ್ಪೆ ಅವರನ್ನು ನೇಮಕ ಮಾಡಲಾಗಿದೆ ಎಂದರು.
ನೂತನ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಖಜಾಂಚಿ ಶೇಖರ್ ಪೂಜಾರಿ, ಸದಸ್ಯರಾದ ಜಗದೀಪ್ ಸುವರ್ಣ, ಕೆ.ಟಿ. ಸುವರ್ಣ, ಸದಾನಂದ ಪೂಜಾರಿ, ಶರತ್ ಸುವರ್ಣ ಬಜ್ಪೆ ಉಪಸ್ಥಿತರಿದ್ದರು.
ಹೊಸ ಸಮಿತಿಯಲ್ಲಿ ಗೊಂದಲ!
ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಡಳಿತ ಸಮಿತಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ನೇಮಕಗೊಂಡ ನೂತನ ಪದಾಧಿಕಾರಿಗಳ ಆಯ್ಕೆ ಸದ್ಯಕ್ಕೆ ಗೊಂದಲವಾಗಿದೆ. ಈಗಾಗಲೇ ಕುದ್ರೋಳಿ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದಂ ನೇತೃತ್ವದ ಸಮಿತಿ ಕ್ಷೇತ್ರದ ಎಲ್ಲಾ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದೆ. ಆದರೆ ಫೆ.೧೬ರಂದು ರಚನೆಗೊಂಡ ನೂತನ ಸಮಿತಿಯು ಕೋರ್ಟ್ ಆದೇಶದ ಬಳಿಕ ತಮ್ಮ ನಿರ್ಧಾರಗಳನ್ನು ಪ್ರಕಟಿಸುವ ಉಮೇದಿನಲ್ಲಿದ್ದು, ಸಮಿತಿಯ ಆಯ್ಕೆ ಬಗ್ಗೆ ಗೊಂದಲಗಳಿವೆ. ಶ್ರೀ ನಾರಾಯಣಗುರು ಎಜುಕೇಶನಲ್ ಟ್ರಸ್ಟ್ (ಕುಟುಂಬವೊಂದರ ಟ್ರಸ್ಟ್) ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಜಾಗ ಅನಧಿಕೃತವಾಗಿ ಕಬಳಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಮಿತಿಯಲ್ಲಿ ಉತ್ತರವಿರಲಿಲ್ಲ. ನೂತನ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ಹಾಗೂ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಈ ಹಿಂದೆ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ಶ್ರೀ ನಾರಾಯಣಗುರು ಎಜುಕೇಶನಲ್ ಟ್ರಸ್ಟ್ ವಿರುದ್ಧವೇ ದೇವರ ಜಾಗ ಕಬಳಿಕೆ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರೂ ಇಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಜತೆಗಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಇರಲಿಲ್ಲ.