ಮಾಹಿತಿ ಆಯುಕ್ತರ ನೇಮಕಾತಿ ತೀರ್ಪು ಮಾ.5ಕ್ಕೆ : ಮಧ್ಯಂತರ ಆದೇಶ ಹೊರಡಿಸುವಿಕೆ ಮುಂದೂಡಿದ ಹೈಕೋರ್ಟ್

highcourt
Published on

ಬೆಂಗಳೂರು: ಸುಪ್ರಿಂಕೋರ್ಟ್ ಆದೇಶ ಉಲ್ಲಂಸಿ ಮುಖ್ಯ ಮಾಹಿತಿ ಆಯುಕ್ತ ಸೇರಿ ಎಂಟು ಮಂದಿ ಮಾಹಿತಿ ಆಯುಕ್ತರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸುವಿಕೆ ಮುಂದೂಡಿದೆ.

ಮಾಹಿತಿ ಆಯುಕ್ತರುಗಳ ನೇಮಕ ವಿಚಾರವಾಗಿ ಮಾ.4ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ದೇವದಾಸ್ ಅವರಿದ್ದ ಏಕಸದಸ್ಯಪೀಠ ಸೋಮವಾರ ಮಧ್ಯಂತರ ಆದೇಶ ನೀಡುವುದನ್ನು ಮಾ.5ರವರೆಗೆ ಮುಂದೂಡಿತು.

ಮಧ್ಯಂತರ ಆದೇಶ ಸಂಬಂಧ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠ, ಮಾಹಿತಿ ಆಯುಕ್ತರ ಖಾಲಿ ಹುದ್ದೆಗಳ ಭರ್ತಿ ಸಂಬಂಧ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು.

ಆ ಕುರಿತಂತೆ ಅಂಜಲಿ ಭಾರದ್ವಾಜ್ ಮತ್ತು ಕೇಂದ್ರ ಸರಕಾರದ ನಡುವಿನ ಪ್ರಕರಣ ಮಾ.4ರಂದು ವಿಚಾರಣೆಗೆ ನಿಗದಿಯಾಗಿದೆ. ಹಾಗಾಗಿ ಮಧ್ಯಂತರ ಆದೇಶ ನೀಡಿಕೆಯನ್ನು ಮುಂದೂಡುತ್ತಿರುವುದಾಗಿ ಆದೇಶಿಸಿತು.

ಅರ್ಜಿದಾರರ ಪರ ವಕೀಲ ಅಶೋಕ್ ಪಾಟೀಲ್, ಸುಪ್ರೀಂಕೋರ್ಟ್ ಅಂಜಲಿ ಭಾರದ್ವಾಜ್ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಗೆ ಶೋಧನಾ ಸಮಿತಿ ರಚನೆ ಮಾಡಬೇಕು. ಬಳಿಕ ಆಯ್ಕೆಯಾದವರ ಪಟ್ಟಿಯನ್ನು ಸಮಿತಿಯ ಮುಂದೆ ಮಂಡಿಸಬೇಕೆಂದು ಆದೇಶಿಸಿತ್ತು.

ಆದರೆ, ಕರ್ನಾಟಕದಲ್ಲಿ ಸಮಿತಿ ರಚನೆ ಮಾಡದೆ ನೇಮಕಗಳನ್ನು ಮಾಡಿ ಆದೇಶ ಮಾಡಲಾಗಿದೆ ಎಂದರು. ನೇಮಕಾತಿ ಸಂಬಂಧ ಆದೇಶ ಪಾಲನೆ ವರದಿ ಸಲ್ಲಿಸಲು ನ್ಯಾಯಾಲಯ ವಿಚಾರಣೆಯನ್ನು ಮಾ.4ಕ್ಕೆ ನಿಗದಿಪಡಿಸಿದೆ ಎಂದರು.

ಆಗ ನ್ಯಾಯಾಲಯ ಹಾಗಾಗಿಯೇ ನಾವು ಸುಪ್ರೀಂಕೋರ್ಟ್‌ನ ಮುಂದಿನ ಆದೇಶವರೆಗೆ ಕಾಯೋಣ ಎಂದು ಹೇಳಿ ವಿಚಾರಣೆಯನ್ನು ಮಾ.5ಕ್ಕೆ ಮುಂದೂಡಿತು.

ರಾಜ್ಯ ಮಾಹಿತಿ ಆಯುಕ್ತರ ಹುದ್ದೆಯ ಆಕಾಂಕ್ಷಿಯಾಗಿದ್ದ ಜೆ.ಪಿ.ನಗರದ ನಿವಾಸಿ ಕೆ.ಮಲ್ಲಿಕಾರ್ಜುನರಾಜು ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net