ಪದವಿ ಕಾಲೇಜು ಅತಿಥಿ ಉಪನ್ಯಾಸಕರ ನೇಮಕಾತಿ: ಕಾನೂನು ಸಲಹೆಗೆ ಮುಂದಾದ ಸರ್ಕಾರ

SUDHAKAR
Published on

ಬೆಂಗಳೂರು: ರಾಜ್ಯದಲ್ಲಿ 2025-26ನೇ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಒದಗಿಸುವ ಬಿಕ್ಕಟ್ಟು ನಿವಾರಿಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆಯು ಕಾನೂನು ಸಲಹೆ ಪಡೆಯಲು ಮುಂದಾಗಿದೆ.

ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಕೆ-ಸೆಟ್/ನೆಟ್/ಪಿಎಚ್.ಡಿ ಅರ್ಹತೆ ಹೊಂದಿರಬೇಕು ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗವು (ಯುಜಿಸಿ) ಮಾನದಂಡವನ್ನು ನಿಗದಿ ಮಾಡಿದೆ. ಆದರೆ, ರಾಜ್ಯದಲ್ಲಿ ಅರ್ಹತೆ ಹೊಂದಿಲ್ಲದ ಮತ್ತು ಹತ್ತಾರು ವರ್ಷಗಳ ಸೇವಾ ಅನುಭವ ಇರುವ ಸಾವಿರಾರು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಮಾನವೀಯತೆ ದೃಷ್ಟಿಯಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವುದು ಸರ್ಕಾರದ ಉದ್ದೇಶವಾದರೂ ಪ್ರಕರಣ ನ್ಯಾಯಾಲಯದಲ್ಲಿದೆ. ಕಾನೂನು ತೊಡಕಿನಿಂದ ನೇಮಕ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲಾಖೆ ಉನ್ನತ ಅಧಿಕಾರಿಗಳು.

ಸರ್ಕಾರಕ್ಕಿರುವ ಕಾನೂನು ತೊಡಕೇನು?

ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವ ವಿಚಾರವಾಗಿ ರಾಜ್ಯ ಹೈಕೋರ್ಟ್‌ನ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಪೀಠದಲ್ಲಿ ಯುಜಿಸಿ ನಿಯಮಗಳ ಪ್ರಕಾರ ಅರ್ಹತೆ ಹೊಂದಿರುವವರನ್ನು ನೇಮಕ ಮಾಡಿಕೊಳ್ಳುವಂತೆ ನ್ಯಾಯಾಲಯವು ಅನುಮತಿ ನೀಡಿದ್ದು, ಅರ್ಹ ಅತಿಥಿ ಉಪನ್ಯಾಸಕರು ಲಭ್ಯವಾಗದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದು, ಸೇವಾ ಅನುಭವ ಇರುವಂತಹವರನ್ನು ಪರಿಗಣಿಸುವಂತೆ ತಿಳಿಸಿದೆ. ಮತ್ತೊಂದು ಪೀಠವು ಯುಜಿಸಿ ಅರ್ಹತೆ ಇಲ್ಲದಿದ್ದರೂ ಸೇವಾ ಅನುಭವವನ್ನು ಪರಿಗಣಿಸುವಂತೆ ಮಧ್ಯಂತರ ತೀರ್ಪು ನೀಡಿದೆ.

ತ್ರಿಶಂಕು ಸ್ಥಿತಿ:

ಕಾನೂನು ತೊಡಕಿನಿಂದ ಸರ್ಕಾರವು ಇಕ್ಕಟ್ಟಿಗೆ ಸಿಲುಕಿದೆ. ಇತ್ತ ನೇಮಕಾತಿ ಮಾಡಿಕೊಳ್ಳುವಂತೆಯೂ ಇಲ್ಲ. ಸುಮ್ಮನಿರುವಂತೆಯೂ ಇಲ್ಲದಂತಾಗಿದೆ. ಮತ್ತೊಂದೆಡೆ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಿರುವ ಕಾರಣ ತರಗತಿಗಳು ನಡೆಯದೆ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ.

ಕೋರ್ಟ್ ಮೊರೆ ಹೋಗಿರುವ 3,800 ಮಂದಿ

ರಾಜ್ಯದ ಮೂರು ಪೀಠದಲ್ಲಿ ಅಪೀಲ್ ಹೋಗಿರುವವರಲ್ಲಿ 3,800 ಮಂದಿ ಯುಜಿಸಿ ಅನರ್ಹತೆ ಹೊಂದಿರುವವರೇ ಇದ್ದಾರೆ. ತ್ವರಿತವಾಗಿ ಪ್ರಕರಣ ಇತ್ಯರ್ಥವಾಗದ ಪರಿಣಾಮ, ನೇಮಕಾತಿ ನಡೆಯುತ್ತಿಲ್ಲ,. ಅಂತಿಮವಾಗಿ ವಿದ್ಯಾರ್ಥಿಗಳು ಪಾಠ ಪ್ರವಚನವಿಲ್ಲದೆ, ಸಮಸ್ಯೆ ಅನುಭವಿಸುವಂತಾಗಿದೆ. ಸರ್ಕಾರಿ ಕಾಲೇಜುಗಳ ಗುಣಮಟ್ಟ ಕುಸಿತಕ್ಕೂ ಕಾರಣವಾಗಿದೆ ಎನ್ನುತ್ತಾರೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು.

ಕಳೆದ ವರ್ಷ 10,500 ಮಂದಿ ನೇಮಿಸಿದ್ದ ಸರ್ಕಾರ

2024-25ನೇ ಸಾಲಿನಲ್ಲಿ ಒಟ್ಟು 10,500 ಅತಿಥಿ ಉಪನ್ಯಾಸಕರನ್ನು ಸರ್ಕಾರವು ನೇಮಕ ಮಾಡಿತ್ತು. ಆದರೆ, ಈ ವರ್ಷ ಪ್ರಕರಣವು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 10,500ರಲ್ಲಿ ಅಂದಾಜು 6,500 ಮಂದಿ ಅರ್ಹತೆ ಹೊಂದಿರುವವರಿದ್ದು, ಉಳಿದ 4 ಸಾವಿರ ಮಂದಿ ಅನರ್ಹರಿದ್ದಾರೆ. ಈ ಅನರ್ಹರು ಕೋರ್ಟ್ ಮೆಟ್ಟಿಲೇರಿರುವುದರಿಂದ ಅರ್ಹರ ನೇಮಕಕ್ಕೂ ಕುತ್ತು ಬಂದಿದೆ.

ಸಮಸ್ಯೆ ಬಗೆಹರಿಸಲು ಸರ್ಕಾರವು ಪ್ರತಿದಿನ ಪ್ರಯತ್ನಿಸುತ್ತಿದೆ. ಕಾನೂನು ತೊಡಕಿನಿಂದ ಸಮಸ್ಯೆ ಇತ್ಯರ್ಥವಾಗುತ್ತಿಲ್ಲ. ಹೀಗಾಗಿ, ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. - ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net