

ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ ಮಗುವಿನ ಮುಖ, ಕಣ್ಣಿಗೆ ಕಾಡಿಗೆ ಹಚ್ಚುವುದು ಸರ್ವೇಸಾಮಾನ್ಯ. ಆದರೆ ಹೀಗೆ ಕಾಡಿಗೆ ಹಚ್ಚುವುದು ಮಕ್ಕಳ ವಿಷಯದಲ್ಲಿ ಎಷ್ಟು ಸುರಕ್ಷಿತ ಎಂಬುದು ಕೂಡ ಮಹತ್ವದ್ದು ಎಂಬ ಕುರಿತು ಪರಿಣತರು ಕೆಲವು ಎಚ್ಚರಿಕೆಯನ್ನೂ ನೀಡಿದ್ದಾರೆ.
ಕಾಡಿಗೆ ಹಚ್ಚುವುದು ಒಳ್ಳೆಯದಾದರೂ ಕಾಡಿಗೆಯ ಆಯ್ಕೆಯಲ್ಲಿ ಎಡವಿದರೆ ಅದು ಅಪಾಯಕಾರಿಯಾಗಿ ಸಂಭವಿಸುವ ಸಾಧ್ಯತೆ ಇರುತ್ತದೆ ಎಂಬುದರ ಬಗ್ಗೆ ವೈದ್ಯಕೀಯ ಪರಿಣತರು ಬೆಳಕು ಚೆಲ್ಲಿದ್ದಾರೆ. ಕಾಡಿಗೆಯಲ್ಲಿನ ಸೀಸದ ಅಂಶವೇ ಅಪಾಯಕ್ಕೆ ಕಾರಣ ಎನ್ನಲಾಗಿದೆ.
ಬಹಳಷ್ಟು ಕಾಡಿಗೆಗಳಲ್ಲಿ ಲೆಡ್ ಸಲ್ಫೈಡ್ ಬಳಸಲಾಗುತ್ತಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗಿರುತ್ತದೆ. ಬಾಯಿ, ಉಸಿರಾಟ ಇಲ್ಲವೇ ಚರ್ಮದ ಮೂಲಕ ಸೀಸದಂಶ ಮಗುವಿನ ದೇಹವನ್ನು ಸ್ವಲ್ಪ ಪ್ರಮಾಣದಲ್ಲಿ ಸೇರಿದರೂ ದೊಡ್ಡಮಟ್ಟದ ಹಾನಿ ಉಂಟುಮಾಡಬಲ್ಲದು. ಇದು ಸಾಮಾನ್ಯವಾಗಿ ಮಕ್ಕಳ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಮೆದುಳು, ಮೂತ್ರಪಿಂಡ, ಅಸ್ಥಿಮಜ್ಜೆ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಕೆಲವೊಮ್ಮೆ ಕೋಮಾ ಇಲ್ಲವೇ ಸಾವಿಗೂ ಕಾರಣವಾಗುವ ಸಾಧ್ಯತೆ ಇರುತ್ತದೆ.
ಹೀಗಾಗಿ ಚಿಕ್ಕ ಮಕ್ಕಳಿಗಾಗಿ ಕಾಡಿಗೆ ಬಳಸುವಾಗ ಉತ್ತಮ ಗುಣಮಟ್ಟದ ಕಾಡಿಗೆ, ಅದರಲ್ಲೂ ಆಯುರ್ವೇದ ಮಾದರಿಯಲ್ಲಿ ಸಿದ್ಧವಾದ ಇಲ್ಲವೇ ಮನೆಯಲ್ಲೇ ಸಾಂಪ್ರದಾಯಿಕವಾಗಿ ಸೂಕ್ತರೀತಿಯಲ್ಲಿ ತಯಾರಿಸಿದ ಕಾಡಿಗೆ ಬಳಸುವುದು ಅತ್ಯುತ್ತಮ ಎಂಬುದು ವೈದ್ಯಕೀಯ ಪರಿಣತರ ಕಿವಿಮಾತು.