ನಾಯಿ ಅಪ್ಪಿ ಕೊಲೆ ಪ್ರಕರಣ: ೧೦ ಮಂದಿ ಬಂಧಿಸಿದ ಪೊಲೀಸರು

arrested
Published on

ಬೆಂಗಳೂರು: ಲಕ್ಕಸಂದ್ರದಲ್ಲಿ ಆಟೋ ಚಾಲಕನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೦ ಮಂದಿ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಲಕ್ಕಸಂದ್ರದ ನಿವಾಸಿ ಶರತ್ ಚಂದ್ರ (೨೯), ಬಿಟಿಎಂ ಲೇಔಟ್‌ನ ದಿಲೀಪ್(೨೭), ಜಯನಗರ ಬೈರಸಂದ್ರ ನಿವಾಸಿ ರವಿಕುಮಾರ್(೨೮), ಜೆ.ಪಿ.ನಗರದ ಆರ್.ಅಭಿಷೇಕ್(೨೬), ಕೋರಮಂಗಲದ ಸುಬೇಂದು ಅಲಿಯಾಸ್ ಕಣ್ಣ(೨೨), ಕೊಲೆಗೆ ಸಹಕರಿಸಿದ ಲಕ್ಕಸಂದ್ರದ ಆಂಟೋನಿ (೨೮), ಆಡುಗೋಡಿಯ ಹರೀಶ್(೨೩), ವಿಲ್ಸನ್ ಗಾರ್ಡನ್ ಬಾಲಸುಬ್ರಮಣ್ಯಂ (೩೧), ಕೋರಮಂಗಲದ ಸತೀಶ್(೨೫), ಎಸ್‌ಡಿಎಸ್ ಟೀಬಿ ಹಾಸ್ಪಿಟಲ್ ಕ್ವಾಟ್ರಸ್‌ನ ದಿಲೀಪ್ ಕುಮಾರ್ (೩೦) ಬಂಧಿತರು.


ಆರೋಪಿಗಳು ಡಿ.೨೪ರಂದು ಸಂಜೆ ೬.೩೦ರ ಸುಮಾರಿಗೆ ಲಕ್ಕಸಂದ್ರದ ೧೪ನೇ ಕ್ರಾಸ್ ಬಳಿ ಆಟೋ ಚಾಲಕ ಜಯಪ್ರಕಾಶ್ ಅಲಿಯಾಸ್ ಅಪ್ಪಿ(೩೩) ಎಂಬಾತನನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆಡುಗೋಡಿ ಠಾಣೆ ಇನ್‌ಸ್ಪೆಕ್ಟರ್ ಸಿ.ರವಿಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಮೂರು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಕಾರ್ತಿಕ್ ಮತ್ತು ವಿಘ್ನೇಶ್ ಎಂಬುವವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾಟ ಕೊಡುತ್ತಿದ್ದ ಕಾರಣಕ್ಕೆ ಕೊಲೆ:
ಕೊಲೆಯಾದ ಆಟೋ ಚಾಲಕ ಜಯಪ್ರಕಾಶ್ ೨೦೦೭ರಲ್ಲಿ ಪಿ.ಸಿ.ರಮೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ೨೦೦೯ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ. ಬಳಿಕ ಲಕ್ಕಸಂದ್ರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಗರ ಗುಂಪು ಕಟ್ಟಿಕೊಂಡು ಗುರಾಯಿಸಿಕೊಂಡು ಓಡಾಡುತ್ತಿದ್ದ. ರಸ್ತೆಯಲ್ಲಿ ಓಡಾಡುವ ಯುವಕರನ್ನು ಕಿಚಾಯಿಸಿ ಕಾಟ ಕೊಡುತ್ತಿದ್ದ. ಡಿ.೨೩ರಂದು ಲಕ್ಕಸಂದ್ರದಲ್ಲಿ ಆರೋಪಿಗಳಾದ ಶರತ್ ಮತ್ತು ಆಂಟೋನಿಗೆ ಕ್ಷುಲ್ಲಕ ವಿಚಾರಕ್ಕೆ ಆವಾಜ್ ಹಾಕಿದ್ದ. ಹೀಗಾಗಿ ಶರತ್ ಮತ್ತು ಆಂಟೋನಿ ಕೋಪಗೊಂಡಿದ್ದರು. ಸುಖಾಸುಮ್ಮನೆ ಕಾಟ ನೀಡುವ ಜಯಪ್ರಕಾಶ್ ಕೊಲೆಗೆ ನಿರ್ಧರಿಸಿದ್ದರು. ಇದಕ್ಕೆ ಇತರೆ ಆರೋಪಿಗಳು ಕೈ ಜೋಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net