

ಬೆಂಗಳೂರು: ನಾಗಮಂಗಲದಲ್ಲಿ ಉತ್ತಮವಾದ ಸೌಹಾರ್ದತೆ ಇತ್ತು. ಕಾಲಕಾಲದಲ್ಲಿ ರಾಜಕೀಯದ ಹಸ್ತಕ್ಷೇಪ, ವಿಭಜನೆಯ ರಾಜಕಾರಣ ತುಷ್ಟೀಕರಣವು ಗಲಭೆಗೆ ಕಾರಣವೆಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ಹೇಳಿದೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಶುಕ್ರವಾರ ವರದಿ ಸಲ್ಲಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ ಮತಕ್ಕಾಗಿ ಆಪಾದಿತರ ಕೇಸುಗಳನ್ನು ಹಿಂಪಡೆಯಲಾಗಿದೆ. ಪೊಲೀಸರ ಸಂಪೂರ್ಣ ವೈಫಲ್ಯತೆ ಕಾಣುತ್ತದೆ. ಪೊಲೀಸರ ಕೈಕಟ್ಟಿ ಹಾಕಿದ್ದರು. ಏನೂ ಕ್ರಮ ಕೈಗೊಳ್ಳಲು ಅವರಿಗೆ ಅವಕಾಶ ಇರಲಿಲ್ಲ. ಯಾರ ಮೇಲೂ ಕೇಸ್ ಮಾಡುವ ಹಾಗಿಲ್ಲ. ಯಾರ ಮೇಲೂ ಕ್ರಮ ಕೈಗೊಳ್ಳುವಂತಿಲ್ಲ ಎಂಬ ಸ್ಥಿತಿ ಪೊಲೀಸರದಾಗಿತ್ತು ಎಂದರು.
25ರಿಂದ 30 ಜನರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಆಗ ಗಲಭೆ ಆಗಿದೆ. ಕಳೆದ ವರ್ಷವೂ ಗಲಭೆ ಆಗಿತ್ತು. ಇದು ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಈ ವೈಫಲ್ಯ ಮತ್ತು ತುಷ್ಟೀಕರಣ ಎದ್ದು ಕಾಣುವಂತಿದೆ.
ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಆರೋಪಿಗಳು ಮಾಸ್ಕ್ ಧರಿಸಿದ್ದು ನೋಡಿದರೆ, ಪೆಟ್ರೋಲ್ ಬಾಂಬ್ ಸಿದ್ಧವಿಟ್ಟಿದ್ದನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು. ನಿರ್ದಿಷ್ಟ ಅಂಗಡಿಗಳನ್ನೇ ಗುರಿ ಮಾಡಿ ಮೂರನೇ ಬಾರಿ ಬಂದು ಬೆಂಕಿ ಹಚ್ಚಿದ್ದಾರೆ.
ನಿರ್ದಿಷ್ಟ ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲ್ ಬಾಂಬಿಗೆ ಪೆಟ್ರೋಲ್ ಕೊಡಲಾಗಿದೆ. ನಾಗಮಂಗಲವು ತಲೆಮರೆಸಿಕೊಂಡಿರುವವರ, ಸಮಾಜಬಾಹಿರ ಶಕ್ತಿಗಳ, ದೇಶದ್ರೋಹಿಗಳು, ಪಿಎಫ್‍ಐ ಚಟುವಟಿಕೆಗಳ ನೆಲೆಯಾಗಿದೆ. ಮಾದಕ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗುತ್ತಿದೆ ಎಂದು ದೂರಿದರು.
ಕೇರಳ ಮೂಲದ ವ್ಯಕ್ತಿಗಳು ಭಾಗಿಯಾದ ಕುರಿತು ಗೃಹ ಸಚಿವರೂ ಹೇಳಿದ್ದಾರೆ. ಬಾಂಗ್ಲಾ ದೇಶೀಯರು ಇರುವ ಬಗ್ಗೆ ಅವರೇ ತಿಳಿಸಿದ್ದಾರೆ. 800 ಎಕರೆ ಹೊಂದಿದ ಪ್ರಬಲ ವ್ಯಕ್ತಿಯ ಜಾಗದಲ್ಲಿ ಬಾಂಗ್ಲಾ ದೇಶೀಯರು ಕೆಲಸ ಮಾಡುತ್ತಿದ್ದಾರೆ ಎಂದರಲ್ಲದೆ, ನಿಷೇಧಿತ ಪಿಎಫ್‍ಐ ಚಟುವಟಿಕೆ ಮಾಡಲು ಹೇಗೆ ಅವಕಾಶ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಎಲ್ಲಿಯೂ ಗಣೇಶೋತ್ಸವ ಸಂದರ್ಭದಲ್ಲಿ ಗಲಾಟೆಗಳು ಆಗಿರಲಿಲ್ಲ. ಇವತ್ತು ರಾಜ್ಯದ 8-10 ಕಡೆ ಗಲಭೆಗಳು ಆಗಿವೆ. ವಿನಾ ಕಾರಣ ಪ್ರಚೋದನೆ ನಡೆದಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೆದಿದೆ. ಇವರ ಕಣ್ಮುಂದೆಯೇ ಎಲ್ಲ ರೀತಿಯ ಅನೈತಿಕ ಚಟುವಟಿಕೆ, ಕಾನೂನು ದುರ್ಬಳಕೆ ಆದರೂ ಕೈಕಟ್ಟಿ ಇರುತ್ತಾರೆ. ಪೊಲೀಸ್ ಇಲಾಖೆಯ 8 ಸಿಬ್ಬಂದಿಗಳ ಮೇಲೆ ಹಲ್ಲೆ ಆಗಿದೆ. ಗಾಯವಾಗಿದ್ದರೂ ಮೆಡಿಕೊ ಲೀಗಲ್ ಕೇಸ್ (ಎಂಎಲ್‍ಸಿ) ಆಗಿಲ್ಲ . ಮುಗ್ಧರ ಮೇಲೆ ಕೇಸ್ ಹಾಕಿದ್ದಾರೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದರು.
ಈ ಸಂದರ್ಭದಲ್ಲಿ ಸತ್ಯಶೋಧನಾ ಸಮಿತಿ ಸದಸ್ಯರಾದ ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ಪಕ್ಷದ ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್ ಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಇದ್ದರು.