ಆದೇಶ ಹಿಂಪಡೆಯಲು ಶಿಕ್ಷಣ ಸಚಿವರಿಗೆ ಮನವಿ

manavi
ಸರ್ಕಾರಿ ಶಾಲೆಗಳಲ್ಲಿ ಪಠ್ಯದ ಹೊರತು ಬೇರೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ ಎಂಬ ಆದೇಶ ಹಿಂಪಡೆಯುವಂತೆ ಡಿ.ಮಂಜುನಾಥ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಶಾಲಾ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಪಠ್ಯದ ಹೊರತು ಬೇರೆ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶಿಸಿರುವುದನ್ನು ನೆಪವಾಗಿಸಿಕೊಂಡು ಶಿಕ್ಷಣಕ್ಕೆ ಪೂರಕವಾದ ಚಟುವಟಿಕೆಗಳನ್ನೂ ನಿರ್ಬಂಧಿಸಲಾಗಿದೆ. ಈ ಆದೇಶ ಹಿಂಪಡೆಯಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಹಲವು ಮಕ್ಕಳಿಗೆ ಕನ್ನಡ ಓದಲು, ಬರೆಯಲು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಸಾಪ ಶಾಲಾ ಹಂತದಲ್ಲಿ ಶಿಕ್ಷಕರಿಗೆ ಕನ್ನಡ ಪಾಠವನ್ನು ರಸವತ್ತಾಗಿ ಮಾಡುವಂತೆ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಭಾಷೆ ಕಲಿಕೆ, ಕನ್ನಡ ಪಠ್ಯದಲ್ಲಿನ ಓದು, ಬರಹದ ಮೂಲಕ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಮಕ್ಕಳಿಗೆ ಸಾಹಿತ್ಯ ಸಮ್ಮೇಳನ ಏರ್ಪಡಿಸಿ, ಮಕ್ಕಳು ಬರೆದ ಕವನ, ಕಥೆ, ಪ್ರಬಂಧ ಓದಲು ವೇದಿಕೆ ಕಲ್ಪಿಸುವ ಹತ್ತು ಹಲವು ಕಾರ್ಯಕ್ರಮ, ತಾಲೂಕು, ಜಿಲ್ಲೆ, ರಾಜ್ಯಮಟ್ಟದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶದಿಂದ ಇದೆಲ್ಲದಕ್ಕೂ ಹಿನ್ನಡೆಯಾಗಿದೆ. ಹೀಗಾಗಿ ಆದೇಶವನ್ನು ಹಿಂಪಡೆಯೇಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net