

ಹನೂರು: ಗ್ರಾಮದಲ್ಲಿ ತೀವ್ರ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಕೌದಳ್ಳಿ ಗ್ರಾಮಸ್ಥರು ಶನಿವಾರ ಸಂಸದ ಸುನೀಲ್ ಬೋಸ್ ಅವರಲ್ಲಿ ಮನವಿ ಮಾಡಿದರು.
ಪಟ್ಟಣದ ಆರ್.ಎಸ್.ದೊಡ್ಡಿ ಸಮೀಪದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಜಿಆರ್‌ಜಿ ಪೆಟ್ರೋಲ್ ಬಂಕ್‌ಗೆ ಶನಿವಾರ ಸಂಸದರು ಭೇಟಿ ನೀಡಿದ್ದ ವೇಳೆ ಕೌದಳ್ಳಿ ಗ್ರಾಮದ ಆಲೀಮ್ ಖಾನ್ ಮಾತನಾಡಿ, ಗ್ರಾಮದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಆಗಾಗ್ಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಲೇ ಇದ್ದು, ತುಂಬ ತೊಂದರೆ ಅನುಭವವಿಸುತ್ತಿದ್ದೇವೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಈ ವೇಳೆ ಸಂಸದರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಗತ್ಯ ಕ್ರಮವಹಿಸಿ ಬಗೆಹರಿಸುವಂತೆ ಸೂಚಿಸಿದರು.
ಪತ್ರಿಕಾ ಭವನಕ್ಕೆ 10 ಲಕ್ಷ ರೂ: ಸಮೀಪದ ರೈತ ಸಂಪರ್ಕ ಕೇಂದ್ರದ ಬಳಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವ ತಾಲೂಕು ಕಾರ್ಯನಿರತ ಪತ್ರಿಕಾ ಭವನದ ಕಾಮಗಾರಿ ಸ್ಥಳಕ್ಕೆ ತೆರಳಿದ ಸಂಸದರು ಪರಿಶೀಲನೆ ನಡೆಸಿದರು. ಈ ವೇಳೆ ಪತ್ರಕರ್ತರು ಭವನದ ಮುಂದುವರಿದ ಕಾಮಗಾರಿಗೆ ಅನುದಾನ ನೀಡುವಂತೆ ಮನವಿ ಮಾಡಿದರು. 10 ಲಕ್ಷ ರೂ ಅನುದಾನ ನೀಡುವುದಾಗಿ ಸಂಸದರು ತಿಳಿಸಿದರು.
ಜಮೀನು ಕೊಡಿಸಿ: ಬಳಿಕ ಸಂಸದರು ಪಟ್ಟಣದಲ್ಲಿ ನಿರ್ಮಿಸುತ್ತಿರುವ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆ ವಿಸ್ತೀರ್ಣಕ್ಕಾಗಿ ಅರಣ್ಯ ಇಲಾಖೆಯ ಕೌಂಪೌಂಡ್ ತೆರೆವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆಯೇ ತೆರೆವುಗೊಳಿಸಲಾಯಿತು. ಇದೇ ವೇಳೆ ಪಪಂ ಸದಸ್ಯ ಮಹೇಶ್ ಮಾತನಾಡಿ, ಪಟ್ಟಣದ ಹೊರವಲಯದಲ್ಲಿನ ಎತ್ತಿನಗುಡ್ಡೆಯ ಬಳಿಯ ಸರ್ವೇ ನಂಬರ್ 469ರಲ್ಲಿ ಈ ಹಿಂದೆ ಸರ್ಕಾರದಿಂದ ಎಸ್ಸಿ ಸಮುದಾಯದ ಜನರಿಗೆ ಜಮೀನನ್ನು ನೀಡಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆ ಕಂದಕವನ್ನು ನಿರ್ಮಿಸಿ ಅತಿಕ್ರಮಿಸಿದ್ದು, ಜನರಿಗೆ ಅನ್ಯಾಯವೆಸಗಿದೆ. ಆದ್ದರಿಂದ ಕಂದಕವನ್ನು ತೆರೆವುಗೊಳಿಸುವುದರ ಮೂಲಕ ಜನರಿಗೆ ಜಮೀನು ಕೊಡಿಸಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಡಿಸಿಎಫ್ ಭಾಸ್ಕರ್ ಅವರಿಂದ ಮಾಹಿತಿ ಪಡೆದ ಸಂಸದರು ಅಗತ್ಯ ಕ್ರಮವಹಿಸಿ ಜನರಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮವಹಿಸುವುದಾಗಿ ಡಿಸಿಎಫ್ ತಿಳಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮುಕುಂದವರ್ಮ, ಚಾಮುಲ್ ನಿರ್ದೇಶಕ ಶಾಹುಲ್ ಆಹಮದ್, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಗುಂಡಾಪುರ ಮಾದೇಶ್, ಪಪಂ ಸದಸ್ಯ ಸಂಪತ್‌ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹದೇಶ್, ಮುಖಂಡರಾದ ಪುಟ್ಟರಾಜು, ಸೋಮಶೇಖರ್ ಹಾಗೂ ಇನ್ನಿತರರು ಇದ್ದರು.