ಪರಿಶಿಷ್ಟ ಜಾತಿಯ ಆದಿಕರ್ನಾಟಕ ಪ್ರಮಾಣ ಪತ್ರ ನೀಡಿ

dss manavi
ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಸ್ಥಾಪಿತ ಬಣದ ಮುಖಂಡರ ನೇತೃತ್ವದಲ್ಲಿ ಸೂಸಲವಾನಿ ಗ್ರಾಮಸ್ಥರು ಡಿಸಿ ಮೀನಾ ನಾಗರಾಜ್‌ಗೆ ಮನವಿ ಸಲ್ಲಿಸಿದರು. ಸುನೀಲ್, ಮಂಜುನಾಥ್, ಅಭಿನವ್, ಶಾಂತಾ ಇತರರಿದ್ದರು.
Published on

ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಸೂಸಲವಾನಿ ಗ್ರಾಮದ ನಿವಾಸಿಗಳಿಗೆ ಪರಿಶಿಷ್ಟ ಜಾತಿಯ ಆದಿಕರ್ನಾಟಕ ಪ್ರಮಾಣ ಪತ್ರವನ್ನು ಪುನಃ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಸ್ಥಾಪಿತ ಬಣದ ಮುಖಂಡರ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್ ಮಾತನಾಡಿ, ಸೂಸಲವಾನಿ ಗ್ರಾಮದಲ್ಲಿ ಸುಮಾರು 150 ವರ್ಷಗಳಿಂದ 100ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಪೂರ್ವಜರ ಕಾಲದಿಂದಲೂ ಇವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲಾಗಿದೆ. ಆದರೆ 1993ರ ಅವಧಿಯಲ್ಲಿ ಅಂದಿನ ತಹಸೀಲ್ದಾರ್ ಕೈಬರಹದಲ್ಲಿ ತಪ್ಪಾಗಿ ಈ ಕುಟುಂಬಗಳನ್ನು ಪುಲಿಯನ್ ಜಾತಿ ಎಂದು ನಮೂದಿಸಿದ್ದಾರೆ. 2013ರ ಬಳಿಕ ಜಾತಿ ಪ್ರಮಾಣಪತ್ರವನ್ನೂ ನವೀಕರಣ ಮಾಡಿಲ್ಲ. ಇದರಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳು ರದ್ದಾಗಿವೆ ಎಂದು ಆರೋಪಿಸಿದರು.
ಈ ಕುಟುಂಬಗಳು ಬಡತನದಲ್ಲಿ ಬದುಕು ಸಾಗಿಸುತ್ತಿವೆ. ಮಕ್ಕಳ ವಿದ್ಯಾಭ್ಯಾಸ ಹಾಗೂ ಸರ್ಕಾರದ ಸವಲತ್ತು ಪಡೆಯಲು ತೊಂದರೆಯಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಪರಿಶೀಲಿಸಿ ಪರಿಶಿಷ್ಟ ಜಾತಿ ಆದಿಕರ್ನಾಟಕದ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು ಮಾತನಾಡಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ದೂರಿದರು.
ಮಹಿಳಾ ವಿಭಾಗದ ಸಂಚಾಲಕಿ ರಾಗಿಣಿ ಮಾತನಾಡಿ, ಜಿಲ್ಲಾಧಿಕಾರಿ ತ್ವರಿತವಾಗಿ ಪರಿಶೀಲಿಸಿ ನ್ಯಾಯ ಕಲ್ಪಿಸುವ ಭರವಸೆ ಇದೆ ಎಂದರು. ದಸಂಸ ತಾಲೂಕು ಸಂಘಟನಾ ಸಂಚಾಲಕ ಸುನೀಲ್, ಗ್ರಾಮಸ್ಥರಾದ ಮಂಜುನಾಥ್, ಸಜಿ, ಅಭಿನವ್, ಶಾಂತಾ, ರಘು, ಉಷಾ, ಶೈಲಾ, ಕೌಶಲ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net