ಮದ್ಯ ಅಕ್ರಮ ಮಾರಾಟ ಕಡಿವಾಣ ಹಾಕಲು ಮನವಿ

dc manavi
Published on

ಶಿವಮೊಗ್ಗ : ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೆಲವೆಡೆ ಮನೆಗಳಲ್ಲಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘಟನೆಯ ಪ್ರಮುಖರು ಮಂಗಳವಾರ ಜಿಲ್ಲಾಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.

ಮದ್ಯ ಮಾರಾಟವನ್ನು ನಿಯಂತ್ರಿಸಬೇಕು ಎಂದು ನಮ್ಮ ಸಂಘಟನೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ. ಆದರೆ ಇದು ನಿಯಂತ್ರಣವಾಗುವ ಬದಲು ಅಕ್ರಮ ಮಾರಾಟ ಹೆಚ್ಚಾಗುತ್ತಿದೆ ಎಂದು ದೂರಿದರು.

ಮದ್ಯ ಅಕ್ರಮ ಮಾರಾಟ ನಿಷೇಧದ ವಿಷಯವನ್ನು ಮಹಿಳಾ ಗ್ರಾಮ ಸಭೆಗಳ ನಿರ್ಧಾರಕ್ಕೆ ವಹಿಸಬೇಕು. ಈ ಸಭೆಗಳಿಗೆ ಪರಮಾಕಾರ ನೀಡಬೇಕು. ಯಾವುದೇ ಮದ್ಯದ ಅಂಗಡಿಗೆ ಪರವಾನಗಿ ನೀಡುವುದು, ಇಲ್ಲವೇ ರದ್ದು ಮಾಡುವುದಕ್ಕೆ ಮಹಿಳಾ ಗ್ರಾಮಸಭೆಗಳ ಒಪ್ಪಿಗೆ ಅಗತ್ಯ ಎಂಬ ಆದೇಶವಾಗಬೇಕು. ಈ ಹಿಂದೆ ಪಂಚಾಯತ್‌ರಾಜ್ ಕಾನೂನಿನಲ್ಲಿ ಈ ಅವಕಾಶ ಕಲ್ಪಿಸಲಾಗಿತ್ತು. ಈಗ ಅದನ್ನು ಹಿಂಪಡೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹರಿಯಾಣ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಮಹಿಳಾ ಗ್ರಾಮ ಸಭೆಗಳಿಗೆ ಪರಮಾಕಾರ ನೀಡಲಾಗಿದೆ. ಇಲ್ಲಿನ ಸರ್ಕಾರ ಕೂಡ ಮಹಿಳಾ ಗ್ರಾಮಸಭೆಗಳ ನಿರ್ಧಾರಕ್ಕೆ ಮನ್ನಣೆ ನೀಡಬೇಕು. ಮದ್ಯಪಾನಕ್ಕೆ ಗ್ರಾಮೀಣ ಪ್ರದೇಶದ ಬಡವರು ಬಲಿಯಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಕಿರಾಣಿ ಅಂಗಡಿ, ಗೂಡಂಗಡಿಗಳಲ್ಲಿ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ರಾಜು ಆಲದಹಳ್ಳಿ, ರಂಜಿತಾ, ಶಾರದಾ, ಲಕ್ಷ್ಮೀ, ಸವಿತಾ, ಮಂಜುಳಾ, ಪಾರ್ವತಿ, ಗಂಗಮ್ಮ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net