ಜಿಲ್ಲೆಗೆ ಕೃಷ್ಣೆ ಹರಿಸಲು ಆಂಧ್ರ ಸಿಎಂಗೆ ಮನವಿ

klr mp
ದೆಹಲಿಯಲ್ಲಿ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರಿಗೆ ಕೋಲಾರದ ಸಂಸದ ಎಂ.ಮಲ್ಲೇಶ್​ಬಾಬು ಮತ್ತು ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಜಿಲ್ಲೆಗೆ ಕೃಷ್ಣಾ ನದಿಯ ನೀರು ಹರಿಸಲು ಮನವಿ ಮಾಡಿದರು. ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಇದ್ದರು.
Published on

ಕೋಲಾರ: ಕೋಲಾರ ಬಯಲು ಸೀಮೆ ಜಿಲ್ಲೆಗೆ ಆಂಧ್ರಪ್ರದೇಶದ ಗಡಿ ಭಾಗಕ್ಕೆ ಹರಿಯುತ್ತಿರುವ ಕೃಷ್ಣಾ ನದಿ ನೀರನ್ನು ಕೋಲಾರ ಜಿಲ್ಲೆಗೆ ಹರಿಸುವ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್​.ಚಂದ್ರಬಾಬುನಾಯ್ಡು ಅವರಿಗೆ ಕೋಲಾರ ಸಂಸದ ಮಲ್ಲೇಶ್​ಬಾಬು ಬುಧವಾರ ಮನವಿ ಮಾಡಿದರು.

ಆಂಧ್ರದ ವೈಜಾಗ್​ ಸ್ಟೀಲ್​ ಕಂಪನಿ ಪುನಶ್ಚೇತನ ಕುರಿತು ಚರ್ಚಿಸಲು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನವದೆಹಲಿಯಲ್ಲಿ ಉಕ್ಕು ಮತ್ತು ಬೃಹತ್​ ಕೈಗಾರಿಕಾ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಆಗಮಿಸಿದಾಗ ಕೃಷ್ಣೆ ನೀರು ಹರಿಸುವ ಕುರಿತು ಪ್ರಸ್ತಾಪಿಸಿದರು.
ಕೃಷ್ಣಾನದಿ ನೀರು ಆಂಧ್ರಪ್ರದೇಶದಲ್ಲಿ ಹರಿಸಲಾಗುತ್ತಿದ್ದು, ಆ ನೀರು ಕರ್ನಾಟಕದ ಗಡಿ ಅಂಚಿನವರೆಗೂ ಹರಿಯುತ್ತಿದೆ. ಆಂಧ್ರಪ್ರದೇಶದಿಂದ ಒಂದು ಟಿಎಂಸಿಯಷ್ಟು ನೀರು ಜಿಲ್ಲೆಗೆ ಹರಿಸಿದರೆ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸಬಹುದು ಎಂದು ಆಂಧ್ರ ಸಿಎಂಗೆ ತಿಳಿಸಿದರು.
ಸಂಸದರ ಮನವಿಗೆ ಸ್ಪಂದಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಅವರು, ಈ ವಿಚಾರದ ಬಗ್ಗೆ ಚರ್ಚೆ ಮಾಡಿ, ನೀರು ಹರಿಸಲು ಸಾಧ್ಯವಾದರೆ ಮುಂದಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಆಂಧ್ರಪ್ರದೇಶದ ಸಚಿವ ಭೂಪತಿರಾಜು ಶ್ರೀನಿವಾಸವರ್ಮ, ವಿಶಾಖಪಟ್ಟಣಂ ಸಂಸದ ಭರತಮ್​, ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net