

ಶಿವಮೊಗ್ಗ: ನೂತನ ಮೋಟಾರ್ ವಾಹನ ಕಾಯ್ದೆಯಲ್ಲಿನ ಕೆಲವು ಅಂಶಗಳು ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರಿಗೆ ಸಂಕಷ್ಟ ಉಂಟು ಮಾಡುತ್ತಿವೆ. ಹೀಗಾಗಿ ಈ ಅಂಶಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಟ್ಯಾಕ್ಸಿ ಮಾಲೀಕರ ಸಂಘ, ಶಿವಮೊಗ್ಗ ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರ ಮತ್ತು ಚಾಲಕರ ಸಂಘದ ಪ್ರಮುಖರು ಮಂಗಳವಾರ ಸಾರಿಗೆ ಇಲಾಖೆ ಜಂಟಿ ಆಯುಕ್ತ ಭೀಮನಗೌಡ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ವಾಹನಗಳಿಗೆ ಪ್ಯಾನಿಕ್ ಬಟನ್, ರೆಟ್ರೋ ರಿಫ್ಲೆಕ್ಟರ್ ಟೇಪ್, ಜಿಪಿಎಸ್ ಅಳವಡಿಸದಿದ್ದರೆ ವಾಹನದ ಎಫ್‌ಸಿ ಮಾಡುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಏಜೆನ್ಸಿಗಳಲ್ಲಿಯೇ ಇವುಗಳನ್ನು ಅಳವಡಿಸಿಕೊಳ್ಳಬೇಕೆಂದು ನಿಯಮ ಮಾಡಿರುವುದು ಸರಿಯಲ್ಲ. ಯೆಲ್ಲೋ ಬೋರ್ಡ್ ಕಾರುಗಳಿಗೆ ಎಲ್‌ಇಡಿ ಬಲ್ಬ್ ಅಳವಡಿಸುವಂತಿಲ್ಲ. ಅಳವಡಿಸಿದರೆ ಸಾವಿರಾರು ರೂ. ದಂಡ ವಿಧಿಸಲಾಗುತ್ತಿದೆ. ಆದರೆ ವೈಟ್‌ಬೋರ್ಡ್ ಕಾರುಗಳಿಗೆ ಈ ನಿಯಮ ಏಕೆ ಅನ್ವಯವಾಗುವುದಿಲ್ಲ ಎಂದು ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳು ಪ್ರಶ್ನಿಸಿದರು.
ಆರ್‌ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಎಲ್ಲದಕ್ಕೂ ಹಣ ನೀಡಬೇಕಾದ ಸ್ಥಿತಿಯಿದೆ. ಇದರಿಂದ ಕೆಲಸ ಮಾಡಿಸಿಕೊಳ್ಳುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್‌ಟಿಒ ಇಲಾಖೆಯಲ್ಲಿ ಲಂಚಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಟ್ಯಾಕ್ಸಿ ಮಾಲೀಕರ ಸಂಘದ ಕಾರ್ಯದರ್ಶಿ ರಾಘವೇಂದ್ರ, ಪ್ರವಾಸಿ ಮ್ಯಾಕ್ಸಿ ಕ್ಯಾಬ್ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಕೋದಂಡ ಇತರರಿದ್ದರು.