

ಶಿವಮೊಗ್ಗ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನವೆಂಬರ್ 3ರಿಂದ 9ರವರೆಗೆ ನಡೆಯುವ ಮಿನಿ ಒಲಂಪಿಕ್ ಕ್ರೀಡಾಕೂಟಕ್ಕೆ ಕರಾಟೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತ ಮೂಲಕ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಮಿನಿ ಒಲಿಂಪಿಕ್ ಆಯೋಜನೆಗೆ ಸಿದ್ಧತೆ ಮಾಡಿಕೊಂಡಿದೆ. ಅದರಲ್ಲಿ ಕರಾಟೆ ಸೇರ್ಪಡೆ ಮಾಡುವುದರಿಂದ ರಾಜ್ಯದ ಪ್ರತಿಭಾನ್ವಿತ ಕರಾಟೆಪಟುಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಕರಾಟೆಯು ವಿಶ್ವಾದ್ಯಂತ ಖ್ಯಾತಿ ಪಡೆದಿದ್ದು, ರಾಜ್ಯದಲ್ಲೂ ಸಾವಿರಾರು ಪ್ರತಿಭಾನ್ವಿತ ಕರಾಟೆ ಕ್ರೀಡಾಪಟುಗಳಿದ್ದಾರೆ. ಕರಾಟೆ ಈಗಾಗಲೇ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ, ಆಲ್ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ಆಲ್ ಇಂಡಿಯಾ ಪೊಲೀಸ್ ಗೇಮ್ಸ್ ಸೇರಿ ಹಲವು ಕ್ರೀಡಾಕೂಟಗಳ ಪಟ್ಟಿಯಲ್ಲಿದೆ. ಸಾಕಷ್ಟು ಕರಾಟೆಪಟುಗಳು ಅದರಲ್ಲಿ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕರಾಟೆ ತಂಡವನ್ನು ಕಳುಹಿಸುವ ಸಲುವಾಗಿ ಮೇಘಾಲಯದಲ್ಲಿ ಕರಾಟೆ ಆಯ್ಕೆ ಪ್ರಕ್ರಿಯೆಯನ್ನೂ ಮಾಡಿದ್ದು, ರಾಜ್ಯದ ಇಬ್ಬರು ಕರಾಟೆಪಟುಗಳು ಅದರಲ್ಲಿ ಸ್ಥಾನ ಪಡೆದಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಶಿವಮೊಗ್ಗ ವಿನೋದ್, ಉಪಾಧ್ಯಕ್ಷ ಅನೂಪ್, ಸಹ ಕಾರ್ಯದರ್ಶಿ ಹರ್ಷಿತ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.