ಪತಿಯನ್ನು ರಕ್ಷಿಸಿಕೊಳ್ಳಲು ನೋಟುಗಳನ್ನು ಸುಟ್ಟ ಅರಣ್ಯಾಧಿಕಾರಿ ಪತ್ನಿಗೆ ಬಿಗ್​ ಶಾಕ್​!

Money Burn
Published on

ಹೈದರಾಬಾದ್​: ಭ್ರಷ್ಟಾಚಾರ ಪ್ರಕರಣದಿಂದ ಪತಿಯನ್ನು ರಕ್ಷಿಸಲು ಕಳಂಕಿತ ಅಧಿಕಾರಿಯ ಪತ್ನಿಯೊಬ್ಬಳು ಸಾಕ್ಷ್ಯಾಧಾರ ನಾಶ ಮಾಡಲು ಯತ್ನಿಸಿರುವ ಪ್ರಕರಣವನ್ನು ಆಂಧ್ರ ಪ್ರದೇಶದ ಎಸಿಬಿ ಅಧಿಕಾರಿಗಳು ಭೇದಿಸಿದ್ದಾರೆ.

ವಿಶಾಖಪಟ್ಟಣಂ ಜಿಲ್ಲೆಯ ದೇವರಪಲ್ಲೇಯಲ್ಲಿ ಎಸಿಬಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುವಾಗ ಪ್ರಕರಣ ಬೆಳಕಿಗೆ ಬಂದಿದೆ. ಪತಿಯನ್ನು ರಕ್ಷಿಸಲು 500 ಮುಖಬೆಲೆಯ ನೋಟುಗಳನ್ನು ಸುಡಲು ಯತ್ನಿಸಿದ ಭ್ರಷ್ಟ ಸರ್ಕಾರಿ ಅಧಿಕಾರಿ ಎಂ. ರಮೇಶ್​ ಕುಮಾರ್​ ಪತ್ನಿ ಎಂ ವಸಂತ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ರಮೇಶ್​, ದೇವರಪಲ್ಲೆಯ ಠಾಣೆಯಲ್ಲಿ ಅರಣ್ಯಾಧಿಕಾರಿಯಾಗಿದ್ದಾರೆ. ದೂರುದಾರ ಬಿ. ಶ್ರೀನು ಪ್ರಕಾರ ದೇವರಪಲ್ಲೆ ಮಂಡಲದ ಸಮ್ಮಿದಿ ಗ್ರಾಮದಲ್ಲಿ ಶ್ರೀನು ಕೆಲ ತೇಗದ ಮರಗಳನ್ನು ಖರೀದಿಸಿದ್ದರಂತೆ. ಬಳಿಕ ಮರಗಳನ್ನು ಕತ್ತಿರಿಸಿ, ಸಾಗಿಸಬೇಕೆನ್ನುವಷ್ಟರಲ್ಲಿ ಈ ವಿಚಾರ ರಮೇಶ್​ಗೆ ತಿಳಿದಿದೆ. ಆವಾಗ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಶ್ರೀನುಗೆ ಬೆದರಿಕೆ ಹಾಕಿದ್ದಾರೆ. ಏನು ಮಾಡದಿರಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ವಿಚಾರವನ್ನು ಶ್ರೀನು ಎಸಿಬಿ ಅಧಿಕಾರಿಗಳಿಗೆ ತಿಳಿಸಿದಾಗ ದೂರು ದಾಖಲಿಸಿಕೊಂಡ ಅಧಿಕಾರಿಗಳು ರಮೇಶ್​ರನ್ನು ರೆಡ್​ಹ್ಯಾಂಡ್​ ಆಗಿ ಹಿಡಿಯಲು ಖೆಡ್ಡಾ ತೋಡಿದ್ದರು. ಅದರಂತೆ ಡಿಎಸ್​ಪಿ ಕೆ ರಂಗರಾಜು ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿಗೆ ಸಿದ್ಧವಾಗಿತ್ತು. ಬುಧವಾರ ಸಂಜೆ ಲಂಚ ಸ್ವೀಕರಿಸುವಾಗ ರಮೇಶ್​​ರನ್ನು ನೇರವಾಗಿ ಎಸಿಬಿ ಅಧಿಕಾರಿಗಳು ಹಿಡಿದಿದ್ದಾರೆ. ಇದೇ ವೇಳೆ ರಮೇಶ್​ ಹಣವನ್ನು ತನ್ನ ಪತ್ನಿ ಕೈಯಲ್ಲಿ ನೀಡಿದ್ದ. ಆಕೆ ಸಾಕ್ಷಿ ನಾಶ ಮಾಡಲು ಹಣವನ್ನು ಸುಡುವಾಗ ಸಿಕ್ಕಿಬಿದ್ದಾರೆ.

ಅರ್ಧ ಬೆಂದಿದ್ದ ನೋಟುಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿರುವ ಅಧಿಕಾರಿಗಳು ಕಳಂಕಿತ ಅಧಿಕಾರಿ ರಮೇಶ್​ರನ್ನು ಬಂಧಿಸಿದ್ದಾರೆ. ರಮೇಶ್​ ಪತ್ನಿಯ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net