

ಬೆಂಗಳೂರು: ಯಾವ ಧರ್ಮ ಮನುಷ್ಯರಿಗೆ ಸಮಾನ ಹಕ್ಕುಗಳನ್ನು ನೀಡುವುದಿಲ್ಲವೋ ಅದು ರೋಗಕ್ಕೆ ಸಮ. ಅದು ನನ್ನ ಪ್ರಕಾರ ಅದು ಧರ್ಮವೇ ಅಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸನಾತನ ಧರ್ಮದ ಕುರಿತು ಮಾತನಾಡಿ ವಿಚಾದಕ್ಕೆ ಗುರಿಯಾಗಿರುವ ತಮಿಳುನಾಡು ಸಿಎಂ ಸ್ಟಾಲಿನ್ ಅವರ ಪುತ್ರ ಉದಯನಿಧಿ ಅವರ ಹೇಳಿಕೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ಸಮಾನ ಹಕ್ಕುಗಳನ್ನು ನೀಡದೆ ನಿಮ್ಮನ್ನು ಮನುಷ್ಯರಾಗಿ ನಡೆಸಿಕೊಳ್ಳದ ಯಾವುದೇ ಧರ್ಮವಾಗಲಿ ಅದು ರೋಗಕ್ಕೆ ಸಮಾನ. ನನ್ನ ಪ್ರಕಾರ ಸಮಾನತೆಯನ್ನು ಉತ್ತೇಜಿಸದೆ ನಿಮಗೆ ಯಾವುದೇ ಮರ್ಯಾದೆ ನೀಡದ ಧರ್ಮ ಧರ್ಮವಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಪ್ರಗತಿಪರ ಲೇಖಕರು ಹಾಗೂ ಕಲಾವಿದರು ಆಯೋಜನೆ ಮಾಡಿದ್ದ ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಚಿವ ಉದಯನಿಧಿ ಸ್ಟಾಲಿನ್ ಕೆಲವು ವಿಚಾರಗಳನ್ನು ನಾವು ವಿರೋಧಿಸುವುದರ ಬದಲು ಅದನ್ನು ನಿರ್ಮೂಲನೆ ಮಾಡುವುದು ಒಳ್ಳೆಯದು. ಮಲೇರಿಯಾ, ಡೆಂಘೆ, ಕೋವಿಡ್ನಂತಹ ಸೋಂಕನ್ನು ವಿರೋದಿಸಬಾರದು ಬದಲಿಗೆ ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನ ಧರ್ಮವನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ಸಚಿವ ಉದಯನಿಧಿ ಸ್ಟಾಲಿನ್ ಹೊಸ ವಿವಾದವನ್ನು ಹುಟ್ಟುಹಾಕಿದ್ದರು.
ಉದಯನಿಧಿ ಸ್ಟಾಲಿನ್ ಹೇಳಿಕೆ ವೈರಲ್ ಆಗುತ್ತಿದ್ದಂತೆ ವಿಪಕ್ಷಗಳ ಒಕ್ಕೂಟ I.N.D.I.A ವಿರುದ್ಧ ಹರಿಹಾಯ್ದಿದ ಬಿಜೆಪಿ ನಾಯಕರು ವೋಟ್ ಬ್ಯಾಂಕ್ ಹಾಗೂ ಓಲೈಕೆ ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಇಳಿದಿರುವುದು ಶೋಚನೀಯ ಎಂದು ಕಿಡಿಕಾರಿತ್ತು. ಉದಯ್ನಿಧಿ ಹೇಳಿಕೆ ಸಂಬಂಧ ದೆಹಲಿಯಲ್ಲಿ ವಕೀಲರೊಬ್ಬರು ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ದಾಖಲಿಸಿದ್ದಾರೆ.