ಒಮಿಕ್ರಾನ್ ಸೃಷ್ಟಿಸಿದ ಆತಂಕ; ಎಚ್ಚರಿಕೆಯೇ ಮದ್ದು

omicron
Published on

ಒಮಿಕ್ರಾನ್ ರೂಪದಲ್ಲಿ ಕರೊನಾದ ಮೂರನೇ ಅಲೆ ಭಾರತ ಪ್ರವೇಶಿಸಿದ್ದು, ಫೆಬ್ರವರಿಯಲ್ಲಿ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂಬ ವಿಜ್ಞಾನಿಗಳ ಎಚ್ಚರಿಕೆಯ ಬೆನ್ನಲ್ಲೇ ಹೊಸ ತಳಿಯ ಸೋಂಕು ಪ್ರಕರಣಗಳು ತೀವ್ರವಾಗಿ ಏರಿಕೆ ಕಾಣುತ್ತಿರುವುದು ಎಚ್ಚರಿಕೆಯ ಗಂಟೆಯೇ ಸರಿ. ಕಳೆದ 24 ಗಂಟೆಗಳಲ್ಲೇ ದೇಶದ ನಾಲ್ಕು ರಾಜ್ಯಗಳಲ್ಲಿ ಒಮಿಕ್ರಾನ್​ನ 64 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 325ಕ್ಕೆ ತಲುಪಿದೆ. ಮಹಾರಾಷ್ಟ್ರ 65, ದೆಹಲಿ 64, ತೆಲಂಗಾಣ 38 ಪ್ರಕರಣಗಳೊಂದಿಗೆ ಮೊದಲ ಮೂರು ಸ್ಥಾನದಲ್ಲಿವೆ. ಕರ್ನಾಟಕದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿಯ ಗಂಭೀರತೆ ಅರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದು, ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ರ್ಚಚಿಸಿದ್ದಾರೆ.

ಜನರು ಕ್ರಿಸ್​ವುಸ್ ಮತ್ತು ವರ್ಷಾಂತ್ಯ ರಜೆಯ ನಿಮಿತ್ತ ಪ್ರವಾಸದ ಸವಿ ಅನುಭವಿಸುತ್ತಿದ್ದಾರೆ. ಆದರೆ, ಪ್ರೇಕ್ಷಣಿಯ ಸ್ಥಳಗಳಲ್ಲಿ, ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳಲ್ಲಿ ಜನಜಂಗುಳಿ ಏರ್ಪಡುತ್ತಿದೆ. ಖರೀದಿ ಭರಾಟೆಯೂ ಜೋರಾಗಿದೆ. ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ನಗರಗಳ ಮಾರುಕಟ್ಟೆಗಳಲ್ಲಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ವ್ಯಾಪಾರ ನಡೆಯುತ್ತಿದೆ. ಇಂಥ ಘಟನೆಗಳಿಂದ ಸೋಂಕು ಪ್ರಸರಣದ ತೀವ್ರತೆ ಹೆಚ್ಚಿದರೆ, ಮೂರನೇ ಅಲೆಯ ಅಬ್ಬರ ಹೊಸ ತಲೆನೋವನ್ನು ಸೃಷ್ಟಿಸಬಹುದು. ಈ ನಡುವೆ ಜಗತ್ತಿನ ವಿವಿಧ ದೇಶಗಳಲ್ಲಿ ಒಮಿಕ್ರಾನ್ ಆರ್ಭಟ ಹೆಚ್ಚುತ್ತಿದ್ದರೆ, ಅಮೆರಿಕ ಮತ್ತು ಯುರೋಪ್​ನಲ್ಲಿ ಕೋವಿಡ್​ನ

ಇನ್ನೊಂದು ರೂಪಾಂತರಿ ಡೆಲ್ಮಿಕ್ರಾನ್ ಪತ್ತೆಯಾಗಿರುವುದು, ಆತಂಕಕ್ಕೆ ಕಾರಣವಾಗಿದೆ. ಡೆಲ್ಮಿಕ್ರಾನ್ ಸೋಂಕು ಡೆಲ್ಟಾ ಮತ್ತು ಒಮಿಕ್ರಾನ್​ಗಳ ಸಂಯೋಜನೆಯಾಗಿದ್ದು ಅವೆರಡಕ್ಕಿಂತ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂಬುದು ತಜ್ಞರ ಅಭಿಪ್ರಾಯ. ಚೀನಾದ ಕ್ಸಿಯಾನ್ ನಗರದಲ್ಲಿ ಬಿಗಿ ಲಾಕ್​ಡೌನ್ ಘೋಷಿಸಲಾಗಿದೆ. ಈ ಬೆಳವಣಿಗೆಗಳನ್ನೆಲ್ಲ ಅವಲೋಕಿಸಿದರೆ ಜಾಗತಿಕವಾಗಿ ಮಹಾಮಾರಿ ಮತ್ತೆ ಆಸ್ಪೋಟಿಸುವ ಸಾಧ್ಯತೆ ಇದೆ. ಹಿಂದಿನ ಅನುಭವಗಳಿಂದ ಪಾಠ ಕಲಿತು, ಸೂಕ್ತ ಎಚ್ಚರಿಕೆ ವಹಿಸುವುದು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಈಗಿನ ಅನಿವಾರ್ಯತೆ.

ಅದೆಷ್ಟೋ ಜನರು ಕರೊನಾ ಹೋಗಿಬಿಟ್ಟಿತು ಎಂಬ ಭಾವದಲ್ಲಿ ಮುಖಗವಸು ಧರಿಸುವುದನ್ನು, ಸುರಕ್ಷಿತ ಅಂತರ ಕಾಪಾಡುವುದನ್ನು ಮರೆತುಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಸೋಂಕಿನ ಹೊಸ ತಳಿ ತಡೆಯಲು ಮರು ಬಳಸಬಹುದಾದ ಬಣ್ಣ ಬಣ್ಣದ ಬಟ್ಟೆ ಮಾಸ್ಕ್​ಗಳು ಪರಿಣಾಮಕಾರಿ ಆಗುವುದಿಲ್ಲ ಎಂದು ತಜ್ಞರು ಎಚ್ಚರಿಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ತಜ್ಞರು ಒಂದಿಷ್ಟು ಅಧ್ಯಯನ, ಸಮೀಕ್ಷೆಗಳ ಆಧಾರದ ಮೇಲೆ ಸಲಹೆ ನೀಡುತ್ತಾರೆ ಎಂಬುದು ನಿಜ. ಆದರೆ, ಈಗಿನ ಬದಲಾಗಿರುವ ಸ್ಥಿತಿಯಲ್ಲಿ ಜನರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ವೈದ್ಯಕೀಯ ಸಂಶೋಧನಾ ಮಂಡಳಿ ಸ್ಪಷ್ಟ ಮಾರ್ಗಸೂಚಿ ಹೊರಡಿಸಿದ್ದಲ್ಲಿ, ಜನರಲ್ಲಿನ ಗೊಂದಲ ನಿವಾರಣೆಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net