Success Story: 'ಮಿಲಿಯನೇರ್ ಆದೆ.. ಆದ್ರೆ ಆ ಹೊಡೆತಕ್ಕೆ ಎಲ್ಲ ಕಳೆದುಕೊಂಡೆ': ಜನಪ್ರಿಯ ಮ್ಯಾಟ್ರಿಮೋನಿಯಲ್ ಸಂಸ್ಥಾಪಕನ ಕಥೆ ಕೇಳಿದ್ರೆ ಬೆರಗಾಗ್ತೀರಾ!

anupam
Published on

ಮುಂಬೈ: ಶಾದಿ.ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಇತ್ತೀಚೆಗೆ ತಾನು ಎದುರಿಸಿದ ಏರಿಳಿತಗಳನ್ನು ಹಂಚಿಕೊಂಡಿದ್ದಾರೆ. ದಿವಾಳಿತನದ ಅಂಚಿನಿಂದ ಮತ್ತೆ ಕೋಟ್ಯಾಧಿಪತಿಯಾದ ಅವರ ಅನುಭವ ಪ್ರತಿಯೊಬ್ಬರಿಗೂ ಉತ್ತೇಜನಕಾರಿಯಾಗಿದೆ.

ಶಾದಿ.ಕಾಮ್ ಈ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಬಹುತೇಕ ಭಾರತೀಯರಿಗೆ ಚಿರಪರಿಚಿತ. ಸಹಸ್ರಾರು ಜೋಡಿಗಳನ್ನು ದಾಂಪತ್ಯ ಬಂಧಕ್ಕೆ ತಂದ ಈ ವೆಬ್‌ಸೈಟ್ ಸಂಸ್ಥಾಪಕ ಅನುಪಮ್ ಮಿತ್ತಲ್. ಒಮ್ಮೆ ಅವರು ಆರ್ಥಿಕ ಕುಸಿತ ಕಂಡು ದಿವಾಳಿಯಾಗಿದ್ದರು. ನಂತರ ಚೇತರಿಸಿಕೊಂಡು, ಮತ್ತೆ ವೈಭವವನ್ನು ಪಡೆದರು. ಅವರು ತಮ್ಮ ಏರಿಳಿತದಲ್ಲಿ ಅನುಭವಿಸಿದ ನೋವು, ನಲಿವಿನ ಕ್ಷಣಗಳು ಹೇಗಿದ್ದವು ಎಂಬುದನ್ನು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಅದರಂತೆ, ಅವರು ತನ್ನ 20ನೇವಯಸ್ಸಿಗೇ ಮಿಲಿಯನೇರ್ ಆದರಂತೆ. '2000ರಲ್ಲಿ ಅವರ ಡಾಟ್ ಕಾಮ್ ಮಾರುಕಟ್ಟೆ ಮೌಲ್ಯವು 40 ಬಿಲಿಯನ್ ಡಾಲರ್‌ ಇತ್ತು. ಅಮೇರಿಕಾದಲ್ಲಿ ನನ್ನ ಜೀವನ ಒಂದು ಕನಸಿನಂತೆ ಕಂಡಿತು. ಆ ಸಮಯದಲ್ಲಿ ನಾನು ಫೆರಾರಿ ಕಾರಿಗೂ ಆರ್ಡರ್ ಮಾಡಿದ್ದೆ. ಆದರೆ ಅದೆಲ್ಲವೂ ಮಂಜಿನಂತೆ ಕರಗಿಹೋಯಿತು. ಡಾಟ್ ಕಾಮ್ ಹಣವೆಲ್ಲ ಮಾಯವಾಯಿತು. ನಾನು ದೊಡ್ಡ ಸಾಲಗಾರನಾಗಿದ್ದೆ' ಎಂದು ಹೇಳಿದರು.

ಅನುಪಮ್ ಮಿತ್ತಲ್ ಇಷ್ಟೆಲ್ಲಾ ಹಿನ್ನಡೆ ಎದುರಿಸಿದರೂ ಹಿಂದೆ ಸರಿಯಲಿಲ್ಲ. '2003ರಲ್ಲಿ ನಾನು ಭಾರತಕ್ಕೆ ಬಂದೆ. ಆಗ ಗೆಲ್ಲುವ ನೆನಪುಗಳನ್ನು ಮಾತ್ರ ಹೊತ್ತು ಬಂದಿದ್ದೆ. ಸೋಲಿನ ಅನುಭವ ಬೆನ್ನಿಗಿತ್ತು. ಇದರೊಂದಿಗೆ ಮತ್ತೊಂದು ಡಾಟ್ ಕಾಮ್ ಯೋಜನೆ (ಶಾದಿ ಡಾಟ್ ಕಾಮ್) ಆರಂಭಿಸಿದೆ. ಡೊಮೇನ್ ಬೆಲೆ 25 ಸಾವಿರ ಡಾಲರ್ ಮತ್ತು ನಮ್ಮಲ್ಲಿ ಕೇವಲ 30 ಸಾವಿರ ಡಾಲರ್ ಇತ್ತು. ಆ ಸಮಯದಲ್ಲಿ ಜನರು ನನ್ನನ್ನು ಮೂರ್ಖ ಎಂದು ಅವಮಾನಿಸಿದರು. ಆಗ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿದೆ. ನನ್ನನ್ನು ನಾನು ಏನೆಂದು ಸಾಬೀತುಪಡಿಸಲು ಬಯಸಿದ್ದೆ. ಯಶಸ್ಸು, ಜನಪ್ರಿಯತೆ ಅನುಸರಿಸದೆ ರಿಸ್ಕ್​ ತೆಗೆದುಕೊಂಡು ಕೆಲಸ ಮಾಡಿದೆ. ಎಲ್ಲಕ್ಕಿಂತ ಮೇಲಾಗಿ ನಿಮ್ಮನ್ನು ನಾನು ನಂಬಿ, ಗೆದ್ದು ತೋರಿಸಿದೆ. ನೀವೂ ಇದೇ ರೀತಿ ಮುನ್ನುಗ್ಗಿ’ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ಲಿಂಕ್ಡ್‌ಇನ್‌ನಲ್ಲಿ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. “ಅಯ್ಯೋ... ಎಷ್ಟೊಂದು ಏರಿಳಿತಗಳು. ಫೆರಾರಿ ಖರೀದಿಸುವುದರಿಂದ ಹಿಡಿದು ದಿವಾಳಿಯಾಗುವವರೆಗೆ..ಮತ್ತೆ ಪುಟುದೇಳುವವರೆಗೆ...ಶಾದಿ ಡಾಟ್ ಕಾಮ್ ಆರಂಭಿಸುವುದು...ಇದೇ ದೃಢಸಂಕಲ್ಪ'' ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net