

ಬೆಂಗಳೂರು: ಶಿವರಾಜಕುಮಾರ್ ಅಭಿನಯದ 'ಘೋಸ್ಟ್' ಚಿತ್ರದಲ್ಲಿ ಮಲಯಾಳಂ ನಟ ಜಯರಾಂ ಅಭಿನಯಿಸುತ್ತಿರುವ ಸುದ್ದಿ ಗೊತ್ತಿದೆ. ಈಗ ಚಿತ್ರತಂಡಕ್ಕೆ ಅನುಪಂ ಖೇರ್ ಸೇರ್ಪಡೆಯಾಗಿದ್ದು, ಮಾರ್ಚ್ನಿಂದ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಅನುಪಂ ಖೇರ್, ಹಿಂದಿಯಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಆದರೆ, ಇದುವರೆಗೂ ಕನ್ನಡದಲ್ಲಿ ಮಾತ್ರ ಅವರು ನಟಿಸಿರಲಿಲ್ಲ. ಈಗ 'ಘೋಸ್ಟ್' ಚಿತ್ರದ ಮೂಲಕ ಅವರು ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
'ಘೋಸ್ಟ್' ಚಿತ್ರದಲ್ಲಿ ಅನುಪಂ ಖೇರ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದನ್ನು ಒಪ್ಪಿಕೊಳ್ಳುವ ನಿರ್ದೇಶಕ ಶ್ರೀನಿ, 'ಅನುಪಂ ಖೇರ್ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಪಾತ್ರ ಏನೆಂಬುದನ್ನು ಈಗಲೇ ಬಹಿರಂಗಪಡಿಸುವುದಕ್ಕೆ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಆ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಮಾರ್ಚ್ನಿಂದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಆಗ ಅನುಪಂ ಖೇರ್ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ' ಎನ್ನುತ್ತಾರೆ.
ಇನ್ನು, ಹೊಸ ವರ್ಷದ ಪ್ರಯುಕ್ತ, 'ಘೋಸ್ಟ್' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಶಿವಣ್ಣ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'Once a Gangster, always a Gangster' ಎಂಬ ಉಪಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿರುವ ಈ ಪೋಸ್ಟರ್ ಯೂಟ್ಯೂಬ್ನ ಸಂದೇಶ್ ಪ್ರೊಡಕ್ಷನ್ಸ್ ಚಾನಲ್ನಲ್ಲಿ ಬಿಡುಗಡೆಯಾಗಿದೆ.
'ಘೋಸ್ಟ್' ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶಿವರಾಜಕುಮಾರ್, ಮಲಯಾಳಂ ನಟ ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ನಟಿಸುತ್ತಿದ್ದಾರೆ. ನಿರ್ದೇಶಕ ಶ್ರೀನಿ ಕಥೆ-ಚಿತ್ರಕಥೆ ಬರೆದರೆ, ಮಾಸ್ತಿ ಮಂಜು ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ.