ಒಂದು ತಾಸಿನೊಳಗೆ ಆಂಟಿಜೆನ್ ಪರೀಕ್ಷೆ | ಹೆಚ್ಚುವರಿ ಶುಲ್ಕ ಪಡೆದರೆ ಕಾನೂನು ಕ್ರಮ

Corona Positive Case
Published on

ಬೆಂಗಳೂರು: ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಗಂಟಲ ದ್ರವದ ಮಾದರಿ ಸಂಗ್ರಹಿಸಿದ ಒಂದು ಗಂಟೆಯೊಳಗೆ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಸೋಂಕಿತರನ್ನು ಶೀಘ್ರ ಪತ್ತೆ ಹಚ್ಚಲು ನಿತ್ಯ 25 ಸಾವಿರಕ್ಕೂ ಹೆಚ್ಚು ಮಂದಿಗೆ ಆಂಟಿಜೆನ್ ಪರೀಕ್ಷೆ ನಡೆಯುತ್ತಿದ್ದು, ಲಕ್ಷಣರಹಿತ ವ್ಯಕ್ತಿಗಳಿಗೆ ಫಲಿತಾಂಶ ಪಾಸಿಟಿವ್ ಬಂದಲ್ಲಿ ಆರ್​ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು. ಇದರಿಂದ ಪ್ರಯೋಗಾಳಯದ ಮೇಲಿನ ಒತ್ತಡ ಕಡಿಮೆ ಆಗಲಿದೆ, ಆಂಟಿಜೆನ್ ಪರೀಕ್ಷೆ ನಡೆಸಿದ ಅರ್ಧ ಗಂಟೆಯಲ್ಲಿ ಫಲಿತಾಂಶ ಒದಗಿಸಲಾಗುತ್ತದೆ ಎಂದು ಆಯುಕ್ತ ಪಂಕಜ್​ಕುಮಾರ್ ಪಾಂಡೆ ತಿಳಿಸಿದ್ದಾರೆ.

ಸೋಂಕಿತರ ಸಂಪರ್ಕ ಹೊಂದಿರುವವರು, ಹಿರಿಯ ನಾಗರಿಕರು, ಅಸ್ವಸ್ಥಗೊಂಡವರಿಗೆ ಆಂಟಿಜೆನ್ ಪರೀಕ್ಷೆ ನಡೆಸಲಾಗುವುದು. ಪ್ರಯೋಗಾಲಯಗಳು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ಪರೀಕ್ಷೆಯ ಯಾವುದೇ ಫಲಿತಾಂಶವನ್ನು ಕಡ್ಡಾಯವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಪೋರ್ಟಲ್​ನಲ್ಲಿ ದಾಖಲಿಸಬೇಕು. ಖಾಸಗಿ ಪ್ರಯೋಗಾಲಯಗಳು ವೈಯಕ್ತಿಕ ಸುರಕ್ಷತಾ ಸಾಧನ ವೆಚ್ಚ (ಪಿಪಿಇ ಕಿಟ್) ಒಳಗೊಂಡು ಪ್ರತಿ ಪರೀಕ್ಷೆಗೆ 700 ರೂ. ಶುಲ್ಕ ಮಾತ್ರ ಪಡೆಯಬೇಕು. ಹೆಚ್ಚಿನ ಹಣ ವಸೂಲಿ ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸೋಂಕು ಲಕ್ಷಣ ಹೊಂದಿರುವ ವ್ಯಕ್ತಿಗಳಿಂದ ಎರಡು ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಮೊದಲ ವರದಿ ಆಧರಿಸಿ ಇನ್ನೊಂದು ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಲ್ಯಾಬ್​ಗಳು ಲಕ್ಷಣಸಹಿತ ಹಾಗೂ ಲಕ್ಷಣರಹಿತ ವ್ಯಕ್ತಿಗಳ ಮಾದರಿಗಳನ್ನು ಪ್ರತ್ಯೇಕವಾಗಿಡಬೇಕು. ಲಕ್ಷಣ ಇರುವವರು ಹಾಗೂ ಇಲ್ಲದವರು ಯಾರೇ ಆದರೂ ಪರೀಕ್ಷೆ ಫಲಿತಾಂಶ ಬರುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು ಎಂದು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net