ಭಯೋತ್ಪಾದನಾ ವಿರೋಧಿ ಅಭಿಯಾನ; ಪಾಕಿಸ್ತಾನವನ್ನು ಜಗತ್ತಿಗೆ ಬಹಿರಂಗಪಡಿಸುತ್ತೇನೆ; ಅಸಾದುದ್ದೀನ್ ಓವೈಸಿ| Oyc

oyc
Published on

ಹೈದರಾಬಾದ್: ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಂತರ, AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ರಚಿಸಲಾದ ಕೇಂದ್ರದ ಸರ್ವಪಕ್ಷ ನಿಯೋಗಗಳಲ್ಲಿ ತಾವು ಭಾಗವಹಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪಾಕಿಸ್ತಾನದ ಉದ್ದೇಶಗಳನ್ನು ವಿದೇಶಿ ಸರ್ಕಾರಗಳಿಗೆ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಓವೈಸಿ ಹೇಳಿದ್ದೇನು.?

ಮಾಜಿ ಅಧ್ಯಕ್ಷ ಮುಹಮ್ಮದ್ ಜಿಯಾ-ಉಲ್-ಹಕ್ ಕಾಲದಿಂದಲೂ ಭಾರತ, ಪಾಕಿಸ್ತಾನದ ಭಯೋತ್ಪಾದನೆಯ ಬಲಿಪಶುವಾಗಿದೆ. ಕಂದಹಾರ್ ವಿಮಾನ ಅಪಹರಣ, 26/11 ಮುಂಬೈ ದಾಳಿ, 2001 ರ ಸಂಸತ್ತಿನ ದಾಳಿ, ಉರಿ ಮತ್ತು ಪಠಾಣ್‌ಕೋಟ್ ಘಟನೆಗಳು ಮತ್ತು ಇತ್ತೀಚೆಗೆ ರಿಯಾಸಿ ಮತ್ತು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಹತ್ಯೆಗಳು ಸೇರಿದಂತೆ ಈ ಇತಿಹಾಸದ ಬಗ್ಗೆ ನಾವು ಜಗತ್ತಿಗೆ ತಿಳಿಸಬೇಕು. ಇದು ಮಾನವೀಯತೆಗೆ ಬೆದರಿಕೆಯಾಗಿದೆ ಎಂದು ಓವೈಸಿ ಪಿಟಿಐಗೆ ತಿಳಿಸಿದರು.

ಏಳು ಸಂಸದರು ಏಳು ನಿಯೋಗಗಳ ನೇತೃತ್ವ ವಹಿಸಲಿದ್ದಾರೆ. ಅವರಲ್ಲಿ ಕಾಂಗ್ರೆಸ್‌ನಿಂದ ಶಶಿ ತರೂರ್, ಬಿಜೆಪಿಯಿಂದ ರವಿಶಂಕರ್ ಪ್ರಸಾದ್, ಜೆಡಿಯುನಿಂದ ಸಂಜಯ್ ಕುಮಾರ್ ಝಾ, ಬಿಜೆಪಿಯಿಂದ ಬೈಜಯಂತ್ ಪಾಂಡಾ, ಡಿಎಂಕೆಯಿಂದ ಕನಿಮೋಳಿ ಕರುಣಾನಿಧಿ, ಎನ್‌ಸಿಪಿಯಿಂದ ಸುಪ್ರಿಯಾ ಸುಳೆ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಸೇರಿದ್ದಾರೆ.

ಪಾಕಿಸ್ತಾನವು ತನ್ನನ್ನು ಇಸ್ಲಾಮಿಕ್ ರಾಷ್ಟ್ರವೆಂದು ಬಿಂಬಿಸಿಕೊಳ್ಳುವ ಪ್ರಯತ್ನಗಳನ್ನು ಅವರು ಟೀಕಿಸಿದ್ದು, ಭಾರತವು ಸುಮಾರು 200 ಮಿಲಿಯನ್ ಮುಸ್ಲಿಮರಿಗೆ ನೆಲೆಯಾಗಿದೆ ಎಂಬುದನ್ನು ಪ್ರತಿಪಾದಿಸಿದರು. ಯಾವ ಗುಂಪಿಗೆ ನನ್ನನ್ನು ನಿಯೋಜಿಸಲಾಗುವುದು ಅಥವಾ ಯಾರು ಮುನ್ನಡೆಸುತ್ತಾರೆಂದು ನನಗೆ ಇನ್ನೂ ತಿಳಿದಿಲ್ಲ. ಆದರೆ ನಾವು ಭಾರತದ ದೃಷ್ಟಿಕೋನವನ್ನು ಪ್ರಸ್ತುತಪಡಿಸಬೇಕು. ಪಾಕಿಸ್ತಾನ ತನ್ನನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಆದರೆ ಭಾರತವು ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಈ ಸಂಗತಿಯನ್ನು ತಿಳಿಸಬೇಕು ಎಂದು ಅವರು ಹೇಳಿದರು.

(ಏಜೆನ್ಸೀಸ್)

ಭೇಟಿ ವೇಳೆ ಭಾರತ-ಪಾಕಿಸ್ತಾನ ಸಂಘರ್ಷ, ಆಪರೇಷನ್ ಸಿಂಧೂರಕ್ಕೆ ಕಾರಣವಾದ ಅಂಶಗಳು, ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ವಿಚಾರಗಳ ಕುರಿತು ವಿದೇಶಿ ನಾಯಕರಿಗೆ ವಿವರಣೆ ನೀಡಲಿದ್ದಾರೆ. ಈ ಮೂಲಕ ಪಾಕಿಸ್ತಾನದ ಬಂಡವಾಳ ಬಯಲು ಮಾಡುವ ಪ್ರಯತ್ನ ನಡೆಸಲಿದ್ದಾರೆ.

ಸರ್ವಪಕ್ಷ ನಿಯೋಗಗಳು ಭಾರತದ ಒಗ್ಗಟ್ಟಿನ ನಿಲುವು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸಲಿವೆ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ದೇಶದ ಸ್ಪಷ್ಟ ಸಂದೇಶವನ್ನು ಅವರು ಜಾಗತಿಕ ವೇದಿಕೆಗೆ ಕೊಂಡೊಯ್ಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net