ಶಾಹೀನ್​ ಬಾಗ್​, ಜಾಮಿಯಾ ಮಿಲಿಯಾ ಆಯ್ತು ಈಗ ಚೆನ್ನೈನಲ್ಲಿ ಸಿಎಎ ಕಿಡಿ; ಪ್ರತಿಭಟನಾಕಾರರು-ಪೊಲೀಸರ ನಡುವೆ ಸಂಘರ್ಷ, 100 ಮಂದಿ ಬಂಧನ

15 Feb 20
Published on

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಶಾಹೀನ್​ ಬಾಗ್​, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಪ್ರದೇಶಗಳಲ್ಲಿ ಈಗಾಗಲೇ ಸಾಕಷ್ಟು ಗಲಾಟೆಗಳು ಆಗಿವೆ.

ಈಗ ಅದು ಚೆನ್ನೈಗೆ ವ್ಯಾಪಿಸಿದೆ. ಶುಕ್ರವಾರ ರಾತ್ರಿ ಇಲ್ಲಿನ ಹಳೆಯ ವಾಷರ್‌ಮ್ಯಾನ್‌ಪೇಟ್ ಪ್ರದೇಶದಲ್ಲಿ ಸಿಎಎ ವಿರೋಧ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ಗಲಾಟೆಯಲ್ಲಿ ಸುಮಾರು 100 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ನಾವು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದೆವು. ಆದರೆ ಪೊಲೀಸರು ಸುಮ್ಮನೆ ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಸುಮ್ಮನೆ ಲಾಠಿ ಚಾರ್ಜ್​ ನಡೆಸಿ ಗಲಾಟೆ ಹೆಚ್ಚುವಂತೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು, ಪ್ರತಿಭಟನಾಕಾರರು ಕುಳಿತುಕೊಂಡು ಧರಣಿ ನಡೆಸುತ್ತಿದ್ದರು. ನಾವು ಅಲ್ಲಿಗೆ ಹೋಗಿ ಅಲ್ಲಿಂದ ಹೋಗುವಂತೆ ಹೇಳಿದ್ದಕ್ಕೆ ನಮ್ಮ ಮೇಲೆ ಕಲ್ಲುಗಳನ್ನು ಎಸೆದಿದ್ದಾರೆ. ಹಾಗಾಗಿ ನಾವು ಕ್ರಮ ಕೈಗೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ಪೊಲೀಸರು ದಾಳಿ ಮಾಡಿದ್ದನ್ನು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್​ ಖಂಡಿಸಿದ್ದಾರೆ. ಅಲ್ಲದೆ ಇದು ಪಳಿನಿಸ್ವಾನಿ ನೇತೃತ್ವದ ರಾಜ್ಯ ಸರ್ಕಾರವೇ ಹೇಳಿ ಮಾಡಿಸಿದ ಗಲಾಟೆ ಎಂದು ಆರೋಪಿಸಿದ್ದಾರೆ.

ಫೆ.14ರಂದು ಕರಾಳ ರಾತ್ರಿ ಎನಿಸಿದೆ. ಶಾಂತಿಯುತವಾಗಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿ ಗಲಭೆ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.

ಸಿಎಎ, ಎನ್​ಆರ್​​ಸಿ ವಿರೋಧಿಸಿ ಹಳೇ ವಾಷರ್‌ಮ್ಯಾನ್‌ಪೇಟ್ ಬಳಿ ಶುಕ್ರವಾರ ಮಧ್ಯಾಹ್ನದಿಂದಲೂ ಮಕ್ಕಳು, ಮಹಿಳೆಯರೆಲ್ಲ ಸೇರಿ ಸುಮಾರು 1000 ಜನರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ತೆರಳಿದ ಪೊಲೀಸರು ಜಾಗ ಖಾಲಿ ಮಾಡುವಂತೆ ಹೇಳಿದಾಗ ಮಾತಿನಚಕಮಕಿ, ಗಲಾಟೆ ಶುರುವಾಗಿದೆ ಎನ್ನಲಾಗಿದೆ.

ಪೊಲೀಸರು ಬಂಧಿಸಿರುವ 100 ಮಂದಿಯನ್ನು ಕೂಡಲೇ ಬಿಡಬೇಕು ಎಂದು ಆಗ್ರಹಿಸಿ ಅನೇಕ ಜನರು ಮಿಂಟ್​ ಮೆಟ್ರೋ ಸ್ಟೇಶನ್​ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.

ಹಳೇ ವಾಷರ್‌ಮ್ಯಾನ್‌ಪೇಟ್ ಬಳಿ ಪ್ರತಿಭಟನೆ ನಡೆಸುವವರು ನಮ್ಮ ಬಳಿ ಅನುಮತಿ ಕೇಳಿರಲಿಲ್ಲ. ಹಾಗಾಗಿಯೇ ಅವರಿಗೆ ಜಾಗ ಖಾಲಿ ಮಾಡುವಂತೆ ಹೇಳಿದ್ದೆವು. ಆದರೆ ಅವರೇ ನಮ್ಮ ಮೇಲೆ ಕಲ್ಲು ಎಸೆದರು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಈ ಮಧ್ಯೆ ಪೊಲೀಸ್ ಆಯುಕ್ತರು ಸೇರಿ, ಉನ್ನತ ಅಧಿಕಾರಿಗಳು ಪ್ರತಿಭಟನಾಕಾರರ ಬಳಿ ಮಾತುಕತೆ ನಡೆಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net