ಅಂತರಂಗ: ಸರಸತೆಯನುಳಿದು ಬಾಳ್ವವನೆ ಕಡುಬಡವ

inner
Published on
ನಮ್ಮ ಆತ್ಮಸ್ವರೂಪದ ವಾಸ್ತವರೂಪವನ್ನು ಅರಿತು ಜೀವಿಸಿದಾಗ ನಿಜವಾದ ರಸಾಸ್ವಾದನೆಯಾಗುತ್ತದೆ. ಹೀಗೆ ಬದುಕದಿರುವವನು ಬಡವ. ಈ ಪ್ರಪಂಚದಲ್ಲಿ ನಮ್ಮ ಅಂತರಾತ್ಮವನ್ನು ತೊರೆದು ಜೀವಿಸಲು ಸಾಧ್ಯವಾಗುವುದಿಲ್ಲ. ನಾವು ಈ ದೇಹದಲ್ಲಿರುವಷ್ಟು ಸಮಯ ಅಂತರಾತ್ಮದೊಡನೆ ಜೀವಿಸಬೇಕು. ನಾವು ಇತರರಿಗೆ ಮೋಸ ಮಾಡಬಹುದು, ಇತರರ ದೃಷ್ಟಿಯಲ್ಲಿ ಉತ್ತಮರಂತೆ ಕಾಣಬಹುದು. ನಿಜದಲ್ಲಿ ನಮ್ಮ ಅಂತರಾತ್ಮನಿಗೆ ಎಂದಿಗೂ ಮೋಸ ಮಾಡಬಾರದು. ರಸರೂಪನಾದ ಅಂತರಾತ್ಮನನ್ನು ಮರೆತು ಕೇವಲ ನಾಮರೂಪಗಳನ್ನು ಸತ್ಯವೆಂದು ಭ್ರಮಿಸಿ ಬಾಳಿದಾಗ ನಾವು ಬಡವರಾಗುತ್ತೇವೆ. ಬಡತನ ಹಾಗೂ ಸಿರಿತನ ನೋಡುವ ದೃಷ್ಟಿಯಲ್ಲಿದೆ.

ಹಲವಾರು ಕೋಟಿ ಹಣವನ್ನು ಸಂಪಾದಿಸಿ ಬಡವರಾಗಿ ಜೀವಿಸುವವರು ಈ ಪ್ರಪಂಚದಲ್ಲಿದ್ದಾರೆ. ಹಣವಿಲ್ಲದೆ ಸಿರಿವಂತರಾಗಿ ಜೀವಿಸುವವರು ಇದ್ದಾರೆ. ಆಹಾರವನ್ನು ನಾವು ಹಸಿವು ನೀಗಿಸುವುದಕ್ಕಾಗಿ ಉಪಯೋಗಿಸಿದರೆ ಸಿರಿವಂತರಾಗುತ್ತೇವೆ. ಹಣಕ್ಕಾಗಿ ಉಪಯೋಗಿಸಿದರೆ ಬಡವರಾಗುತ್ತೇವೆ. ನಿಧಿ ಸೇರಿದಷ್ಟು ಬಡವರಾಗುತ್ತೇವೆ. ಈ ಪ್ರಪಂಚದ ವಾಸ್ತವವನ್ನು ಅರಿತ ಸಾಧುಸಂತರು ಅನಾದಿ ಕಾಲದಿಂದ ಇದೇ ಸತ್ಯವನ್ನು ಬೋಧಿಸುತ್ತಾ ಬಂದಿದ್ದಾರೆ. ನಾವು ಸ್ವಾರ್ಥದ ಬಲೆಗೆ ಸಿಕ್ಕಿ ನಿಜರೂಪವನ್ನು ಮರೆತು ಇತರರಿಗಾಗಿ ಬದುಕಲು ಸಮಯವನ್ನು ವಿನಿಯೋಗಿಸಿದ್ದೇವೆ.

ಡಿ.ವಿ.ಜಿ.ಯವರು ನಿನ್ನ ವಾಸ್ತವರೂಪವಾದ ನಿಷ್ಕಳಂಕ ಆತ್ಮಸ್ವರೂಪದಲ್ಲಿ ಬದುಕುವುದನ್ನು ಕಲಿಯೆಂದು ನಮಗೆ ಹೇಳುತ್ತಿದ್ದಾರೆ. ಪ್ರಕೃತಿಯಲ್ಲಿರುವ ಯಾವ ಪದಾರ್ಥವೂ ನಮ್ಮದಲ್ಲ. ಅದು ಹಿಂದೆ ನಮ್ಮದಾಗಿರಲಿಲ್ಲ. ಈಗ ನಮ್ಮದಲ್ಲ. ಮುಂದೆಯೂ ನಮ್ಮದಾಗಿರುವುದಿಲ್ಲ. ಈ ತತ್ತ್ವವನ್ನು ಅರಿತು ಜೀವಿಸುವ ಕಲೆಯನ್ನು ರೂಢಿಸಿಕೊಳ್ಳಬೇಕು. ಡಿವಿಜಿಯವರು ಈ ಭೂಮಿಯೊಂದು ಪುಣ್ಯಕ್ಷೇತ್ರ, ನಾವು ಯಾತ್ರಿಗಳು. ಸಮಯ ಬಂದಾಗ ಈ ಪ್ರಪಂಚವನ್ನು ಬಿಡಲು ಸಿದ್ಧರಾಗಿರಬೇಕೆಂದು ಮಂಕುತಿಮ್ಮನ ಕಗ್ಗದಲ್ಲಿ ಹೇಳಿದ್ದಾರೆ. ಸೂರ್ಯನ ಬೆಳಕು, ಚಂದ್ರನ ಕಾಂತಿ, ಮರಗಳಿಂದ ಹೊರಟ ಗಾಳಿ ಇವು ಒಬ್ಬರಿಗಾಗಿ ಅಲ್ಲ. ಅದೇ ರೀತಿ ನಮ್ಮಲ್ಲಿರುವ ಯಾವುದೇ ಪ್ರಕೃತಿದತ್ತವಾದ ಶಕ್ತಿ ಎಲ್ಲರಿಗಾಗಿ ಹಾಗೂ ಆತ್ಮಸಂತೃಪ್ತಿಗಾಗಿ ವಿನಿಯೋಗವಾದರೆ ನಾವು ಸಿರಿವಂತರಾಗಿ ಬದುಕುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net