ಅಂತರಂಗದ ವಿಚಾರ: ಮನವೆಂಬ ಮರ್ಕಟ

Published on
‘ಮನಸ್ಸನ್ನು ನಿಗ್ರಹ ಮಾಡು. ಆಗ ಏನನ್ನಾದರೂ ಸಾಧಿಸಬಹುದು’ ಎಂದು ತಿಳಿದವರು ಹೇಳುತ್ತಾರೆ. ಆದರೆ ಯಾರಾದರೂ ಮನಸ್ಸನ್ನು ನಿಗ್ರಹ ಮಾಡಲು ಪ್ರಯತ್ನಿಸಿದಾಗ, ಅದು ಅಸಾಧ್ಯವೇ ಸರಿ ಎಂದು ಬಹುಬೇಗ ಅವರಿಗೆ ಅನ್ನಿಸುತ್ತದೆ. ಇನ್ನು ಕೆಲವರು ಮನೋನಿಗ್ರಹ ಸಾಧ್ಯವೇ ಇಲ್ಲ ಎಂದು ಮನಸ್ಸನ್ನು ಹರಿಯುವುದಕ್ಕೆ ಬಿಟ್ಟುಬಿಡುತ್ತಾರೆ.

ಶಾಸ್ತ್ರಗ್ರಂಥಗಳು ಮನಸ್ಸಿನ ಸ್ವಭಾವ ಮಂಗಕ್ಕೆ ಹೋಲಿಸುತ್ತಾರೆ. ಅದು ಮಂಗ ಬೇರೆ. ಮರದಿಂದ ಮರಕ್ಕೆ, ಕೊಂಬೆಯಿಂದ ಕೊಂಬೆಗೆ, ಕ್ಷಣಮಾತ್ರದಲ್ಲಿ ಹಾರುತ್ತಿರುತ್ತದೆ. ಮಂಗನಿಗೆ ಯಾರೋ ಹೆಂಡವನ್ನು ಕುಡಿಸಿಬಿಟ್ಟರು. ಆಲೋಚಿಸಿ ಆ ಮಂಗನ ಸ್ಥಿತಿ. ಅದರ ಜೊತೆಗೆ ಮಂಗನಿಗೆ ಚೇಳು ಕಚ್ಚಿಬಿಟ್ಟಿದೆ. ಆ ನೋವಿನಿಂದ ಕೋತಿಯು ಎಗರಾಡುತ್ತಿದೆ. ಅದೇ ಸಮಯದಲ್ಲಿ ಆ ಕೋತಿಯನ್ನು ಬ್ರಹ್ಮರಾಕ್ಷಸವೊಂದು ಪ್ರವೇಶಿಸಿಬಿಟ್ಟಿದೆ. ಆ ಮಂಗನ ಸ್ಥಿತಿಯನ್ನು ವರ್ಣಿಸಲು ಕಷ್ಟವೇ ಸರಿ. ಹೀಗೆ ನಮ್ಮ ಮನಸ್ಸು ಕೂಡ. ಪ್ರತಿ ನಿಮಿಷ, ಪ್ರತಿ ಕ್ಷಣ, ನಮ್ಮ ಮನಸ್ಸು ಒಂದು ವಿಷಯದಿಂದ, ಒಂದು ವಿಷಯಕ್ಕೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುತ್ತಿರುತ್ತದೆ. ಈಗ ನಮ್ಮ ಊರಿನಲ್ಲಿ, ಮುಂದೆ ಯಾವುದೋ ಪಟ್ಟಣದಲ್ಲಿ, ಇನ್ನು ಸ್ವಲ್ಪ ಸಮಯದಲ್ಲೇ ಬೇರೆ ದೇಶಗಳಿಗೆ ಹಾರಿಬಿಡುತ್ತದೆ. ಎಷ್ಟೋ ಬಾರಿ ನಮ್ಮ ಮನಸ್ಸು ಎಲ್ಲೆಲ್ಲಿ ಹೋಗುತ್ತಿರುತ್ತದೆ ಎಂದೇ ನಮಗೆ ತಿಳಿಯದು. ಒಂದು ಕ್ಷಣದಲ್ಲಿ ನೂರಾರು ಆಲೋಚನೆಗಳು, ನೂರಾರು ಭಾವನೆಗಳು. ಅವನ್ನು ನಿಗ್ರಹಿಸಲು ಕಷ್ಟಸಾಧ್ಯ ಎನಿಸಿಬಿಡುತ್ತದೆ. ನಮ್ಮ ಮನಸ್ಸು ವಿಮಾನ, ಬೆಳಕಿಗಿಂತಲೂ ವೇಗವಾಗಿ ಹೋಗಬಲ್ಲದು.

ಅಂಥ ಚಂಚಲ ಮನಸ್ಸನ್ನು ಅಭ್ಯಾಸ ಮತ್ತು ರಾಗ್ಯಗಳಿಂದ ನಿಯಂತ್ರಿಸಬಹುದು ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಾನೆ. ಅಭ್ಯಾಸ ಎಂದರೆ ಒಳ್ಳೆಯ ಆಲೋಚನೆ, ಕೆಲಸಗಳನ್ನು ಮಾಡುವುದು. ಒಳ್ಳೆಯ ಸಂಸ್ಕಾರಗಳನ್ನು ಬೆಳಸಿಕೊಳ್ಳುವುದು, ಶಿಸ್ತನ್ನು ಅಳವಡಿಸಿಕೊಳ್ಳುವದರಿಂದ ನಾವು ಸಚ್ಚಾರಿತ್ರ್ಯಂತರಾಗುತ್ತೇವೆ. ಆಗ ಮನಸ್ಸನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ. ವೈರಾಗ್ಯ ಎಂದರೆ ಕೆಟ್ಟ ಆಲೋಚನೆ, ಕೆಲಸಗಳನ್ನು ಮಾಡದಿರುವುದು ಎಂದು. ನಾವು ಒಳ್ಳೆಯ ಆಲೋಚನೆಗಳನ್ನು ಮಾಡುವುದು ಎಷ್ಟು ಮುಖ್ಯವೋ, ಕೆಟ್ಟ, ನಕಾರಾತ್ಮಕ ಆಲೋಚನೆಗಳನ್ನು ಮಾಡದಿರುವುದೂ ಅಷ್ಟೇ ಮುಖ್ಯ. ಈ ಸರಳ ಸಾಧನೆಯಿಂದ ಮನವೆಂಬ ಮರ್ಕಟವನ್ನು ಸುಲಭವಾಗಿ, ಶೀಘ್ರದಲ್ಲೇ ನಿಗ್ರಹಿಸಿ ನಾವು ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net