

ಸಕಲೇಂದ್ರಿಯಂಗಳಲ್ಲಿ, ವಿಕಾರಿಸುವ ಮನವ
ಸೆಳೆದು ನಿಂದಾತನೇ ಸುಖಿ / ಪಂಚೇಂದ್ರಿಯಂಗಳಿಚ್ಛೆಯಲ್ಲಿ
ಕೀಳುಮವಂಗೊಂಡು / ಸುಳಿವಾತನೇ ದುಃಖಿ
ಇಂದ್ರಿಯಗಳ ಬಲೆಯಲ್ಲಿ ಬಿದ್ದವರು ದುಃಖಿಗಳು, ಬೀಳದವರು ಸುಖಿಗಳು. ಭೂಮಿಯನ್ನು ಚಾಪೆಯಂತೆ ಸುತ್ತಬಹುದು. ಮೇರು ಪರ್ವತವನ್ನು ಒಂದೇ ಬೆರಳಿನಿಂದ ಎತ್ತಬಹುದು. ಆದರೆ ಇಂದ್ರಿಯಗಳನ್ನು ತಡೆಯುವುದಾಗದು. ಯಾರು ಇಂದ್ರಿಯಗಳನ್ನು ಜಯಿಸುತ್ತಾರೋ ಅವರಿಂದ ಜಗತ್ತು ಜಯಿಸಲ್ಪಡುತ್ತದೆ. ಇಂದ್ರಿಯಗಳ ಆಸೆಮಾಡಿ ಕೆಡಬೇಡ ಎಂದು ಶರಣರು ಮತ್ತು ಆರ್ಯೋಕ್ತಿ ಸಹ ಹೇಳಿರುವುದು. ಇಂದ್ರಿಯಗಳ ವಿಷಯದಲ್ಲಿ ನಿಜಗುಣ ಶಿವಯೋಗಿಗಳು ಇಂದ್ರಿಯಗಳ ಮೇಲೆ ವಿಜಯ ಸಾಧಿಸುವುದು ನಿಜವಾದ ಶೂರತನ ಎಂದಿದ್ದಾರೆ. ಎಷ್ಟೋ ಜನರು ಹಾಗೂ ಋಷಿಮುನಿಗಳು ಇಂದ್ರಿಯಗಳ ಬಲೆಗೆ ಬಿದ್ದ ಉದಾಹರಣೆಗಳಿವೆ. ಒಂದು ಉದಾಹರಣೆ ಹೀಗಿದೆ: ವ್ಯಾಸರು ಜೈಮಿನಿಗೆ ಒಂದು ಶ್ಲೋಕ ಹೇಳಿದರು. ಅದೇನೆಂದರೆ.‘ಮಾತಾ ಸ್ವಸ್ರಾ ದುಹಿತ್ರಾವಾ ವೈಕ ಶಿಯ್ಯಾ ನೋ ಭೂತ್ | ಬಲವಾನ್ ಇಂದ್ರಿಯ ಗ್ರಾಮೋ ವಿದ್ವಾಂಸೋ ಮಪಿಕರ್ಷತಿ’.
ತಾಯಿ, ಅತ್ತೆ, ಸೊಸೆ, ಮಗಳು, ಸ್ತ್ರೀ ಮೊದಲಾದವರ ಸಂಗಡ ಒಂದೇ ಹಾಸಿಗೆ ಮೇಲೆ ಮಲಗಬಾರದು. ಇಂದ್ರಿಯಗಳು ಬಲಿಷ್ಠವಾಗಿವೆ ಎಂದು ಶ್ಲೋಕ ಬರೆದಿಟ್ಟಾಗ ಜೈಮಿನಿ, ‘ಮಪಿಕರ್ಷಿತಿ’ ಎಂದು ಇದ್ದುದನ್ನು ‘ನಾಪಿಕರ್ಷತಿ’ ಎಂದು ತಿದ್ದುವನು. ವಿದ್ವಾಂಸರನ್ನು ಇಂದ್ರಿಯಗಳು ಅಕರ್ಷಿಸುವುದಿಲ್ಲ ಎಂದು. ಮುಂದೆ ವ್ಯಾಸರು ಒಡ್ಡಿದ ಪರೀಕ್ಷೆಯಲ್ಲಿ ಜೈಮಿನಿ ಸೋತನು. ತಪ್ಪಾಯಿತು ಎಂದು ಕ್ಷಮೆ ಕೇಳಿದನು. ಅದಕ್ಕೆ ಇಂದ್ರಿಯಗಳಿಗೆ ಮುಖ್ಯವಾದ ಮನಸ್ಸನ್ನು ಹತೋಟಿಯಲ್ಲಿ ಇಡಬೇಕು.