

ಯೇಸುವಿನ ಮಹಿಮೆಯನ್ನು ಮನಗಂಡು, ಅವರ ಬಗ್ಗೆ ಮಾತನಾಡುವಾಗ ಯೇಶಾಯ ಹೀಗೆಂದು ಹೇಳಿದ್ದಾರೆ: ‘ಯೆಹೂದಿಯರಲ್ಲಿ ಹಲವು ಮಂದಿ ಮುಖಂಡರಿಗೆ ಯೇಸುವಿನಲ್ಲಿ ವಿಶ್ವಾಸ ಮೂಡಿತು. ಆದರೆ ಫರಿಸಾಯರ ಗುಂಪು ಮಾತ್ರ ಜನ ತಮ್ಮನ್ನು ಪ್ರಾರ್ಥನಾಮಂದಿರಗಳಿಂದ ಬಹಿಷ್ಕಾರ ಹಾಕಬಹುದೆಂಬ ಭಯದಿಂದ ದೇವರ ಬಗೆಗಿನ ತಮ್ಮ ವಿಶ್ವಾಸವನ್ನು ಬಹಿರಂಗವಾಗಿ ಪ್ರಕಟಪಡಿಸಲಿಲ್ಲ.
ಏಕೆಂದರೆ, ದೇವರಿಂದ ದೊರಕಬಹುದಾದ ಅನಂತ ಕಾಲದ ಮನ್ನಣೆಗಿಂತ ನಶ್ವರ ಮಾನವರಿಂದ ದೊರಕುವ ಅಲ್ಪಕಾಲದ ಮನ್ನಣೆಯೇ ಅವರಿಗೆ ಆಗ ಪ್ರಿಯವಾಗಿ ಕಾಣಿಸಿತ್ತು.’ ಈ ಎಲ್ಲ ವಿದ್ಯಮಾನಗಳನ್ನು ತಮ್ಮ ಕಣ್ಣೆದುರಿಗೇ ಕಂಡ ಯೇಸು ತಾಳ್ಮೆ ಕಳೆದುಕೊಂಡವರಂತೆ ತಮ್ಮ ಧ್ವನಿ ಏರಿಸಿ ಗಟ್ಟಿಯಾಗಿ ಹೀಗೆಂದು ಕೂಗಿ ಹೇಳಿದರು: ‘ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ. ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ. ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆ ಹೋದರೆ ಅಂಥವನಿಗೆ ತೀರ್ಪು ಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿಯೇ ಹೊರತು ತೀರ್ಪು ಕೊಡುವುದಕ್ಕಾಗಿ ಅಲ್ಲ.
ನನ್ನನ್ನು ನಿರಾಕರಿಸಿ ನನ್ನ ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪು ಕೊಡುವಂಥದ್ದು ಒಂದು ಇದೆ. ಅದು ಯಾವುದೆಂದರೆ, ನಾನೇ ಆಡಿದ ಮಾತು. ಅಂತಿಮ ದಿನದಂದು ಅದೇ ಅವನಿಗೆ ತೀರ್ಪು ಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲ ಮಾತನಾಡುತ್ತಿಲ್ಲ. ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನ್ನನ್ನು ಕಳುಹಿಸಿದ ಪಿತನೇ ನನಗೆ ಆಜ್ಞೆ ಮಾಡಿದ್ದಾರೆ. ಅವರ ಆಜ್ಞೆಯೇ ನಿತ್ಯ ಜೀವದಾಯಕ ಎಂದು ನಾನು ಬಲ್ಲೆ. ಆದುದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.’ ಇದನ್ನು ಆಲಿಸಿದ ಜನಸ್ತೋಮ ಬೆರಗುಗಣ್ಣುಗಳಿಂದ ಅವರನ್ನೇ ನೋಡುತ್ತಿದ್ದರು.