

ಜೀವನದಲ್ಲಿ ಉಸಿರು ಇರುವವರೆಗೂ ಪ್ರಶ್ನೆ, ಸಮಸ್ಯೆಗಳಿಗೆ ಕೊನೆಯಿಲ್ಲ. ಉದಾಹರಣೆಗೆ ಮನೆಯಲ್ಲಿ ಮಡದಿ ಮಾತು ಕೇಳುವುದಿಲ್ಲ. ಮಗ ಮೂರ್ಖ. ಮಗಳಿಗೆ ವರ ಬಂದಿಲ್ಲ. ಲಕ್ಷಗಟ್ಟಲೆ ವರದಕ್ಷಿಣೆ ಕೊಡಬೇಕು. ಕೊಟ್ಟರೂ ಒಳ್ಳೆಯ ಅಳಿಯ ಸಿಗುತ್ತಾನೋ ಇಲ್ಲವೋ ಗೊತ್ತಿಲ್ಲ.
ಕಷ್ಟಪಟ್ಟು ಓದಿ ಪದವಿ ಮುಗಿಸಿದ ಮೇಲೆ ನೌಕರಿಗಾಗಿ ಅಲೆದಾಟ. ಸುಸ್ತಾಗಿ ಸಾಕಪ್ಪ ಎನ್ನುವ ಹೊತ್ತಿಗೆ ನೌಕರಿ ಸಿಕ್ಕಿತು. ಸಿಕ್ಕಿದ ನೌಕರಿಗೆ ಲಂಚಾವತಾರಿಗಳ ಕಾಟ. ಲಂಚ ತೆರಬೇಕು. ಅದಕ್ಕಾಗಿ ಗುಣಹೀನರ ಕಾಲು ಹಿಡಿಯಬೇಕು. ಸ್ವಂತ ಉದ್ಯೋಗದಿಂದ ಮುಂದೆ ಬರಬೇಕೆಂದರೆ ವ್ಯಾಪಾರದಲ್ಲಿ ಹಾನಿಯಾಗುವ ಸಂಭವ. ಒಂದುವೇಳೆ ಲಾಭ ಅತಿಯಾದರೆ ಸಂಬಂಧಿಕರ ಆರ್ತ ಧ್ವನಿ. ಬೇಡಿಕೆಯ ಕಾಟ.
ಕೊಟ್ಟರೆ ಮರಳಿ ಬರುವ ಮಾತೇ ಇಲ್ಲ. ಕೊಡದಿದ್ದರೆ ಜಿಪುಣ, ಕ್ರೂರ ಮನುಷ್ಯ ಎಂಬ ಅಪವಾದ ಬರುವುದು. ಪರಿಚಯದವರು ಅಪರಿಚಿತರಾಗುತ್ತಾರೆ. ಎಲ್ಲಿಯವರೆಗೆ ಹಣ ನಮ್ಮಲ್ಲಿರುವುದೋ ಅಲ್ಲಿಯವರೆಗೆ ಬಂಧು ಬಳಗ ಪರಿವಾರದವರೆಲ್ಲ ನಮ್ಮವರಾಗುತ್ತಾರೆ. ಸಂಪತ್ತು ತೀರಿದ ಮರುದಿನವೇ ಸಂಬಂಧ ಕಡಿದುಹೋಗುತ್ತದೆ.
ಹೀಗಿದೆ ಜೀವನದ ಕಥೆ. ಇಲ್ಲಿ ಪ್ರಶ್ನೆಗಳ ಸಂಖ್ಯೆಗಿಂತ ಸಮಸ್ಯೆಗಳ ಸಂಖ್ಯೆಯೇ ಹೆಚ್ಚು. ಇದು ವೈಯಕ್ತಿಕ ಜೀವನದ ಕಥೆ. ಇನ್ನು ಸಾಮಾಜಿಕ ಜೀವನದ ಕತೆಯನ್ನು ಕೇಳುವುದೇ ಬೇಡ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ಲಂಚ, ಮೋಸ, ಅನ್ಯಾಯ, ಕಪಟ, ಕುತಂತ್ರ, ಯುದ್ಧ ಆಕ್ರಮಣ, ಆಹಾರದ ಅಭಾವ, ಅಶಾಂತಿ, ಅತಿವೃಷ್ಟಿ, ಅನಾವೃಷ್ಟಿ - ಇವೇ ಮುಂತಾದ ಸಹಸ್ರಾರು ಸಮಸ್ಯೆಗಳು. ಪ್ರಕಟ ಮುಖ ಒಂದು ರೀತಿ. ಅಪ್ರಕಟಿತ ಮುಖ ಇನ್ನೊಂದು ರೀತಿ.