ಅಂತರಂಗ; ದೇವರಲ್ಲಿ ಏನು ಬೇಡಬೇಕು?

Antaranga vvani
Published on
ದೇವರಲ್ಲಿ ನಾವು ಏನು ಕೇಳಿಕೊಳ್ಳಬೇಕು? ಆರೋಗ್ಯ, ಕೆಲಸ, ಮಕ್ಕಳ ಮದುವೆ, ಮಕ್ಕಳಾಗಬೇಕು, ಶ್ರೀಮಂತಿಕೆ ಬೇಕು - ಹೀಗೆ ಒಂದಲ್ಲ, ಎರಡಲ್ಲ, ನೂರಾರು ಬೇಡಿಕೆ ಸಲ್ಲಿಸಬೇಕಿದೆ. ಆದರೆ ದೇವಸ್ಥಾನಗಳಿಗೆ ಹೋಗಿ, ದೇವರೆದುರು ನಿಂತು ಪ್ರಾರ್ಥನೆ ಮಾಡುವಾಗ ಒಂದನ್ನು ಕೇಳಿಕೊಳ್ಳಲು ಹೋಗಿ ಮತ್ತೊಂದನ್ನು ಮರೆಯುತ್ತೇವೆ.

ಬಹಳಷ್ಟು ಬೇಡಿಕೆಗಳನ್ನು ಇಟ್ಟುಕೊಂಡು ಹೋಗಿ, ಕೆಲವನ್ನು ಕೇಳಿಕೊಂಡು, ಕೆಲವನ್ನು ಮರೆತುಬರುವುದಕ್ಕಿಂತ ಒಂದೇ ಬೇಡಿಕೆ ಇಟ್ಟುಕೊಳ್ಳೋಣ. ಆ ಬೇಡಿಕೆಯನ್ನು ದೇವರ ಮುಂದಿಟ್ಟರೆ ಎಲ್ಲ ಅಪೇಕ್ಷೆಗಳೂ ಪೂರ್ಣವಾಗಬೇಕು. ಅಂಥ ಬೇಡಿಕೆಯನ್ನಷ್ಟೇ ದೇವರಲ್ಲಿ ಸಲ್ಲಿಸೋಣ.

ಒಬ್ಬ ಸ್ತ್ರೀ ತಪಸ್ಸು ಮಾಡಿದಾಗ ದೇವರು ಪ್ರತ್ಯಕ್ಷನಾಗಿ, ‘ಅದು ಇದು ಎಂದು ಹತ್ತುಹಲವು ವರ ಕೇಳದೆ ಒಂದೇ ವರ ಕೇಳು’ ಎಂದ. ಆಕೆ ಕೇಳಿದ್ದೇನು? ‘ನಾನು ನನ್ನ ಹತ್ತು ಅಂತಸ್ತುಗಳ ಮನೆಯ ಮೇಲೆ ಇರುವಾಗ ಮರಿಮಗ ಕೆಳಗೆ ನಿಂತು ಹಸಿವೆಯಿಂದ ಕೂಗಿದಾಗ, ಬೇಗ ಇಳಿದುಬಂದು, ಬಂಗಾರದ ತಟ್ಟೆಯಲ್ಲಿ ಅವನಿಗೆ ಊಟ ಮಾಡಿಸಬೇಕು’ ಎಂಬ ವರ ಕೇಳಿದಳು.

ಅದರಲ್ಲಿ ಎಲ್ಲವೂ ಅಡಗಿತ್ತು. ಹತ್ತು ಅಂತಸ್ತಿನ ಮನೆ, ಬಂಗಾರದ ತಟ್ಟೆ ಕೇಳಿದ್ದರಿಂದ ಸಂಪತ್ತು ಬಂತು. ಮರಿಮಗನನ್ನು ಕೇಳಿದ್ದರಿಂದ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲ ಸಿಕ್ಕರು. ದೀರ್ಘಾಯುಷ್ಯವೂ ಸಿಕ್ಕಿತು. ಮರಿಮಗ ಕೂಗಿದಾಗ ಕೇಳಿಸಬೇಕು, ಬೇಗನೆ ಇಳಿದುಬರಬೇಕೆಂದು ಕೇಳಿದ್ದರಿಂದ ಇಂದ್ರಿಯಪಾಟವ, ಗಟ್ಟಿ ದೇಹ, ಆರೋಗ್ಯ ಸಿಕ್ಕಿತು. ಅದರಂತೆ ನಾವೂ ದೇವರಲ್ಲಿ ಒಂದೇ ವರ ಕೇಳೋಣ.

ಅದರಲ್ಲಿಯೇ ಎಲ್ಲ ಬೇಡಿಕೆಗಳೂ ಸೇರಬೇಕು. ಅಂಥ ವರ ಯಾವುದು? ‘ಪ್ರಸನ್ನೋ ಭವ ಸರ್ವೆಶ ಶರಣಾಗತವತ್ಸಲ |’ ‘ದೇವ! ನಿನ್ನ ಅನುಗ್ರಹ ಒಂದಿರಲಿ. ಸಾಕು. ಬೇರಾವ ಬೇಡಿಕೆಯನ್ನೂ ಬೇಡುವುದಿಲ್ಲ.’

ನಾನಾ ವಿಧದ ಬೇಡಿಕೆಗಳನ್ನು ಸಲ್ಲಿಸಿದರೂ ನಮ್ಮ ನಮ್ಮ ಕರ್ಮಕ್ಕೆ ತಕ್ಕಂತೆ ಫಲ ಕೊಡುವ ದೇವರಿಗೆ, ಯಾವ ಕಾಲಕ್ಕೆ ಏನೇನು ಕೊಡಬೇಕೆಂದು ಗೊತ್ತಿರುವುದಿಲ್ಲವೇ? ಹಾಗಾಗಿ ಆ ಭಗವಂತನೆದುರು ಅದು ಇದು ಎಂದು ಏನೇನೋ ಬೇಡಿಕೆಗಳನ್ನು ಸಲ್ಲಿಸಿ ಮೂರ್ಖತನ ತೋರಿಸುವುದು ಬೇಡ. ‘ನಿನ್ನ ಅನುಗ್ರಹ ಒಂದಿರಲಿ’ ಎಂದು ಬೇಡುವುದು ಭಕ್ತನ ನೈಜಲಕ್ಷಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net