

ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲನ್ನು ಇಡುವ ಜನ ಹೆಚ್ಚಿದ್ದಾರೆ. ಸ್ವಾರ್ಥಕ್ಕಾಗಿ ಆದರ್ಶ, ಮೌಲ್ಯಗಳನ್ನು ನಾಶಮಾಡಲು ಹಿಂಜರಿಯರು. ವೈಚಾರಿಕತೆ ಮತ್ತು ಸುಧಾರಣೆಯ ನೆಪದಲ್ಲಿ ಸಭ್ಯತೆ, ಸಂಸ್ಕೃತಿ, ಪರಂಪರೆ ನಾಶಮಾಡಲು ಹೊಂಚುಹಾಕುತ್ತಿರುವ ದುಷ್ಟಶಕ್ತಿಗಳು ಕೂಡ ಇವೆ. ಸತ್ಯ-ಸಂಸ್ಕೃತಿ ಉಳಿವಿಗಾಗಿ, ಶಾಂತಿ-ನೆಮ್ಮದಿಯ ಬದುಕಿಗಾಗಿ ಭಕ್ತಸಂಕುಲವನ್ನು ಸತ್ಪಥದ ಸನ್ಮಾರ್ಗದಲ್ಲಿ ಕರೆದೊಯ್ಯುವುದು ಗುರುಪೀಠಗಳ ಧರ್ಮವಾಗಿದೆ. ಧರ್ಮ ಮತ್ತು ಜಾತಿಗಳ ಸಂಘರ್ಷದ ಇಂದಿನ ದಿನಗಳಲ್ಲಿ ಆದರ್ಶ ಮೌಲ್ಯಗಳ ಉಳಿವು ಮತ್ತು ಬೆಳವಣಿಗೆ ಅತ್ಯಂತ ಆವಶ್ಯಕವಾಗಿದೆ ಎಂಬುದನ್ನು ಮರೆಯಬಾರದು.
ವಿಶ್ವವಂದ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರು ಈ ಭೂಮಿಗೆ ಅವತರಿಸಿ ಬಂದದ್ದೇ ಲೋಕೋದ್ಧಾರ ಕಾರ್ಯ ಮಾಡಲು ಎಂಬುದನ್ನು ಮರೆಯುವಂತಿಲ್ಲ. ಪರಶಿವನ ಸದ್ಯೋಜಾತ ಮುಖಸಂಭವರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಉದ್ಧರಿಸಿದರು. ಲೋಕದಲ್ಲಿ ಸಂಚರಿಸಿ ಜನಸಮುದಾಯದಲ್ಲಿ ಜಾಗೃತಿ, ಸಂಸ್ಕಾರ, ಸದ್ವಿವೇಕವನ್ನು ಬೆಳೆಸಿದರು. ಸತ್ಯ, ಧರ್ಮ, ನ್ಯಾಯ, ನೀತಿ, ಸೌಜನ್ಯ, ಸದ್ಭಾವನೆಗಳ ಬೀಜ ಬಿತ್ತಿ ಬೆಳೆದು ಆರೋಗ್ಯಪೂರ್ಣ ಸಮಾಜ ನಿರ್ವಿುಸಲು ಶ್ರಮಿಸಿದರು.
ವಿಶ್ವಾಸವಿದ್ದಲ್ಲಿ ಪ್ರೀತಿ ವಾತ್ಸಲ್ಯವಿರುತ್ತದೆ. ಅನುಮಾನ ಸಂಶಯಗಳು ಇದ್ದರೆ ವಾತ್ಸಲ್ಯ ಕಾಣಲಾಗದು. ಯಾರೋ ಹೂ ತಂದು ಕೊಡುತ್ತಾರೆಂದು ಕಾಯುತ್ತ ಕುಳಿತುಕೊಳ್ಳಬೇಕಿಲ್ಲ. ನಿಮ್ಮ ಹೃದಯದ ಹೂದೋಟದಲ್ಲಿ ಒಂದು ಹೂವಿನ ಗಿಡವನ್ನು ನೆಡಿ. ಅದು ಪ್ರತಿದಿನ ನಿಮಗೆ ಸುಗಂಧಮಯವಾದ ಹೂವು ಕೊಡುತ್ತದೆ.