

ಸುಖ ಎಲ್ಲರಿಗೂ ಬೇಕು. ದುಃಖ ಯಾರಿಗೂ ಬೇಡ. ಸುಖ-ದುಃಖ ಒಂದೇ ನಾಣ್ಯದ ಎರಡು ಮುಖ. ಒಂದರ ನಂತರ ಇನ್ನೊಂದು ಬಂದೇ ಬರುತ್ತದೆ. ನೋವಿರಲಿ ನಲಿವಿರಲಿ ಎಲ್ಲ ಸಂದರ್ಭಗಳಲ್ಲಿ ನೆಮ್ಮದಿಯಿಂದ ಬಾಳುವ ಜೀವನ ಬೇಕು. ‘ನಿನ್ನ ನೆರಳಿನಡಿಯಲ್ಲಿ ಬೆಳೆಸು ಬಲಿಸು.
ಮೃಗಜಲ ಕಂಡರೂ ಕಣ್ಣಿಗೆ ಕಾಣದು. ಆ ಜಲದಲ್ಲಿ ಮೀನು ಸಿಗಲಾರದು. ಕಡಲಿನಲ್ಲಿ ಅಮೂಲ್ಯ ಮುತ್ತುಗಳಿವೆ. ಚಿತ್ರದ ಕಡಲಿನಲ್ಲಿ ಮುಳುಗಿ ಮುತ್ತು ತರಲು ಸಾಧ್ಯವಿಲ್ಲವಲ್ಲ. ಕನಸಿನಲ್ಲಿ ಏನೆಲ್ಲ ಕಾಣಬಹುದು. ಅದು ನಿಜವಲ್ಲ. ಕನಸಿನಲ್ಲಿ ಕಂಡ ನದಿ ಕಟ್ಟಿ ನೀರಾವರಿ ಕೃಷಿ ಮಾಡಲು ಸಾಧ್ಯವಾಗದು.
ಕಾಮನಬಿಲ್ಲು ನೋಡಲು ಬಲು ಚೆನ್ನ. ಆದರೆ ಆ ಬಣ್ಣದಿಂದ ಚಿತ್ರ ಬರೆಯಲು ಬಾರದು. ಗಂಟು ಎಂದರೆ ಸಂಪತ್ತು. ಕನ್ನಡಿಯೊಳಗಿನ ಗಂಟಿನಿಂದ ವ್ಯಾಪಾರ ವ್ಯವಹಾರ ಮಾಡಲು ಸಾಧ್ಯವಾಗದು. ಅದರಂತೆ ಸುಖ ದುಃಖಗಳ ಮಿಶ್ರಣವಿಲ್ಲದೆ ಬದುಕಿನ ಬಾಳಬಂಡಿ ಸುಗಮವಾಗಿ ಸಾಗಲು ಸಾಧ್ಯವಿಲ್ಲ.
ಅರಿವುಳ್ಳ ಮನುಷ್ಯನಿಗೆ ಒಂದೇ ದಾರಿ. ಗುರಿ ಇಲ್ಲದ ಅಧಮಂಗೆ ಹಲವು ದಾರಿ. ಸತ್ಯ ಶುದ್ಧ ಪ್ರಾಮಾಣಿಕತೆಯ ಬದುಕಿಗೆ ಸಂಸ್ಕಾರದ ಸಂವರ್ಧನೆ ಬಲು ಮುಖ್ಯ. ಸಂಸ್ಕಾರವಿಲ್ಲದ ಸಂಸ್ಕೃತಿಯಿಲ್ಲದ ಮತ್ತು ಸ್ವಾಭಿಮಾನವಿಲ್ಲದ ಜನರಿಂದ ಧರ್ಮ ಸಂಸ್ಕೃತಿ ಪರಂಪರೆ ಮತ್ತು ಆದರ್ಶಗಳು ನೆಲ ಕಚ್ಚುತ್ತಿವೆ.
ಎಲ್ಲೆಡೆಯಲ್ಲೂ ಬರ. ಭೌತಿಕ ಮತ್ತು ಅಧ್ಯಾತ್ಮದ ಬರ. ಪ್ರೀತಿ, ನೀತಿ, ರೀತಿ, ಸಾತ್ವಿಕತೆಯ ಬರ. ಎಲ್ಲ ಬರಗಳು ದೂರ ಸರಿಯಲಿ. ಸಂತೃಪ್ತಿ ಸಮಾಧಾನ ಶಾಂತಿ ತುಂಬಿ ಜೀವನದಲ್ಲಿ ಸಂತೋಷ ಸದ್ಗತಿ ಪ್ರಾಪ್ತವಾಗಲಿ. ಜಗದ್ಗುರು ಶ್ರೀ ರೇಣುಕಾಚಾರ್ಯರು ಬಿತ್ತಿ ಬೆಳೆದ ಅಧ್ಯಾತ್ಮದ ಫಸಲು ನಮ್ಮೆಲ್ಲರ ಹಸಿವೆಯನ್ನು ಹಿಂಗಿಸಲಿ. ಜಾತಿ ಜಾತಿಗಳ ಸಂಘರ್ಷ ನಿಂತು ಶಾಂತಿ ಸಾಮರಸ್ಯ ಸರ್ವತ್ರ ಬೆಳೆದುಬರಲಿ. ಗುರುಕಾರುಣ್ಯದ ಕಡಲಿನಲ್ಲಿ ಸಕಲರ ಬಾಳು ಉಜ್ವಲವಾಗಲಿ.