

ಜನತೆಯ ಪಾಲಿಗೆ ತಮ್ಮ ಜೀವನದ ಹಾಗೂ ಸ್ವತ್ತಿನಿಂದ ಇಲ್ಲದವರೇ ಮೋಮಿನ್ (ಸತ್ಯವಿಶ್ವಾಸಿ) ಆಗಿರುತ್ತಾನೆ. ಸತ್ಯಸಂಧತೆ ಇಲ್ಲದವರಲ್ಲಿ ಈಮಾನ್ (ಸತ್ಯವಿಶ್ವಾಸ) ಇಲ್ಲ. ವಚನ ಪಾಲಿಸದವರಲ್ಲಿ ಧರ್ಮವಿಲ್ಲ. ಒಬ್ಬ ಮನುಷ್ಯನಿಗೆ ಒಳ್ಳೆಯದನ್ನು ಮಾಡಿ ಸಂತೋಷ ಆಗುವುದಾದರೆ ಹಾಗೂ ಕೆಟ್ಟದ್ದನ್ನು ಮಾಡಿ ಬೇಸರಪಡುವುದಾದರೆ ಅಂತಹ ವ್ಯಕ್ತಿ ಸತ್ಯವಿಶ್ವಾಸಿ ಆಗಿರುತ್ತಾನೆ. ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ವಿಶ್ವಾಸವಿರುವವರು ಅತಿಥಿಗಳನ್ನು ಗೌರವದಿಂದ ಕಾಣಬೇಕು. ನೆರೆಹೊರೆಯವರೊಡನೆ ಜಗಳವಾಡಬಾರದು, ಅವರಿಗೆ ಕಿರುಕುಳ ನೀಡಬಾರದು, ಅವರೊಡನೆ ಒಳ್ಳೆಯ ಮಾತುಗಳನ್ನೇ ಆಡಬೇಕು, ಇಲ್ಲದಿದ್ದರೆ ಮೌನವಾಗಿರಬೇಕು. ಸತ್ಯವಿಶ್ವಾಸಿಯು ಮೂದಲಿಸಬಾರದು. ಶಾಪ ಕೊಡಬಾರದು, ಬೈಯಬಾರದು, ಸುಳ್ಳು ಹೇಳಬಾರದು, ವಂಚಿಸಬಾರದು. ನೆರೆಹೊರೆಯವರು ಹಸಿದಿರುವಾಗ ತಾನು ಊಟ ಮಾಡಬಾರದು. ಮಾನವನು ಆರು ವಿಷಯಗಳಲ್ಲಿ ಭರವಸೆಯನ್ನು ನೀಡಬೇಕು, ಆಗ ಪೈಗಂಬರರು ಸ್ವರ್ಗದ ಭರವಸೆಯನ್ನು ಕೊಡುತ್ತಾರೆ. ಸತ್ಯ ನುಡಿಯಬೇಕು, ವಾಗ್ದಾನವನ್ನು ಪಾಲಿಸಬೇಕು, ಪ್ರಾಮಾಣಿಕತೆಯಿಂದ ಇರಬೇಕು, ದುರಾಚಾರಗಳಿಂದ ದೂರವಿರಬೇಕು, ಹೀನ ದೃಷ್ಟಿಯಿಂದ ದೂರವಿರಬೇಕು, ಅಕ್ರಮಿಗಳಾಗಿರಬಾರದು. ಬೆಲೆ ಹೆಚ್ಚಿಸುವುದಕ್ಕಾಗಿ ಪದಾರ್ಥಗಳನ್ನು ಬಚ್ಚಿಟ್ಟಿರುವವನು ಶಾಪಕ್ಕೆ ಅರ್ಹನಾಗಿರುತ್ತಾನೆ. ಸುಳ್ಳು ಸಾಕ್ಷಿ ಹೇಳುವವರು ಮಹಾ ಪಾಪಿಷ್ಠರಾಗಿರುತ್ತಾರೆ. ದೇವರನ್ನು ಅನುಸರಿಸುವವರು ತಮ್ಮ ಮನಸ್ಸಿನೊಡನೆ ಹೋರಾಡುವವರೇ ನಿಜವಾದ ಯೋಧರು. ದೇವರಿಗೆ ವಿರುದ್ಧವಾದ ಕಾರ್ಯಗಳನ್ನು ತೊರೆಯುವವರೇ ನಿಜವಾದ ಭಕ್ತರು.