

ಪ್ರವಾದಿ ಮುಹಮ್ಮದ್ (ಸ) ಅವರ ಸುಪ್ರಸಿದ್ಧ ವಚನಗಳಲ್ಲಿ ಮುಂದಿನ ವಚನವೂ ಒಂದು. ಮನುಷ್ಯ ಕೆಟ್ಟ ವಿಚಾರಗಳನ್ನು ಯೋಚಿಸುವುದು ಅವನನ್ನು ಅಧಃಪತನಕ್ಕೆ ತಳ್ಳುತ್ತದೆ ಎಂಬುದು ಆ ವಚನದ ಒಟ್ಟು ಅರ್ಥವಾಗಿದೆ. ದೇವರನ್ನು ಮರೆತ ಮಾನವನಿಗೆ ಆತನ ವ್ಯಭಿಚಾರದ ಪಾಲು ಲಭಿಸಿಯೇ ಲಭಿಸುವುದು.
ಒಂದು ಹೆಣ್ಣನ್ನು ಅಥವಾ ಪುರುಷನನ್ನು ಕಾಮುಕ ಮನೋಭಾವನೆಯಿಂದ ನೋಡುವುದು ಕಣ್ಣಿನ ವ್ಯಭಿಚಾರವಾಗುತ್ತದೆ. ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿ ಅಶ್ಲೀಲ ಮಾತುಗಳನ್ನು ಆಲಿಸುವುದು ಕಿವಿಯ ವ್ಯಭಿಚಾರವಾಗುತ್ತದೆ. ಅಶ್ಲೀಲ ವಿಚಾರಗಳನ್ನು ಮಾತನಾಡುವುದು ನಾಲಗೆಯ ವ್ಯಭಿಚಾರವಾಗುತ್ತದೆ.
ವ್ಯಕ್ತಿ ವ್ಯಕ್ತಿಯನ್ನು ಸ್ಪರ್ಶಿಸುವುದು ಕೈಯ ವ್ಯಭಿಚಾರವಾಗುತ್ತದೆ. ವ್ಯಭಿಚಾರದ ಪೂರೈಕೆಗಾಗಿ ನಡೆದುಕೊಂಡು ಹೋಗುವುದು ಕಾಲುಗಳ ವ್ಯಭಿಚಾರವಾಗುತ್ತದೆ. ವ್ಯಭಿಚಾರಕ್ಕಾಗಿ ಬಲವಂತ ಮಾಡುವುದು ಮನಸ್ಸಿನ ವ ್ಯಭಿಚಾರವಾಗುತ್ತದೆ. ಒಟ್ಟಾರೆ ಗುಹ್ಯೇಂದ್ರಿಯವು ವ್ಯಭಿಚಾರದ ಕಾರ್ಯವನ್ನು ನಡೆಸುತ್ತದೆ ಇಲ್ಲವೇ ಅದರಿಂದಲೇ ವ್ಯಭಿಚಾರ ನಿಲ್ಲುತ್ತದೆ.
ಮನುಷ್ಯನ ಮನಸ್ಸು ಅವನ ಶರೀರದ ಮೇಲೆ ಹಿಡಿತವನ್ನು ಸಾಧಿಸುತ್ತದೆ. ವ್ಯಕ್ತಿಯ ಮನದಲ್ಲಿ ನೀಚವಿಚಾರ ಮೂಡಿದರೆ ಆ ಪಾಪದಿಂದ ತಡೆಯಲು ಯಾವ ವಸ್ತುವೂ ಇಲ್ಲ. ಮಾನವನ ಅಂಗಾಂಗಗಳು ಅವನ ಆಸೆಯನ್ನು ಈಡೇರಿಸುವುದರಲ್ಲಿಯೇ ಮಗ್ನವಾಗಿರುತ್ತವೆ. ಆದ್ದರಿಂದ ಮನಸ್ಸಿನಲ್ಲಿ ಹುಟ್ಟುವ ದುರ್ವಿಚಾರಗಳನ್ನು ದೂರ ಮಾಡಲು ಮನಸ್ಸು ಮಾಡಬೇಕು.