ಅಂತರಂಗ: ಪ್ರವಾದಿಯವರ ಚಿಂತನೆಗಳು

Antaranga vvani
Published on

ಪ್ರವಾದಿ ಮುಹಮ್ಮದ್ (ಸ) ಅವರ ವಿಚಾರಧಾರೆ ಎಂಥವರನ್ನೂ ವಿಸ್ಮಯಕ್ಕೆ ಈಡುಮಾಡುತ್ತದೆ. ಅಭಿವೃದ್ಧಿ ಹೊಂದಬೇಕಾದ ಮಾನವನು ಪ್ರಾಚೀನವಾದ ಮೂಢ ಸಂಪ್ರದಾಯಗಳನ್ನು ತ್ಯಜಿಸಬೇಕು. ದೈವಧ್ಯಾನದಲ್ಲಿ ಮುಳುಗಬೇಕು. ಸತ್ಯವನ್ನು ನುಡಿಯಬೇಕು. ಸತ್ಯಮಾರ್ಗದಲ್ಲಿ ನಡೆಯಬೇಕು. ಸಚ್ಚಾರಿತ್ರ್ಯನ್ನು ಬೆಳೆಸಿಕೊಳ್ಳಬೇಕು. ನೆಂಟರಿಷ್ಟರ ಹಕ್ಕುಬಾದ್ಯತೆಗಳನ್ನು ತೀರಿಸಬೇಕು. ಕಷ್ಟಕಾರ್ಪಣ್ಯಗಳಲ್ಲಿ ಇರುವವರ ಹೊರೆಯನ್ನು ಹೊರಬೇಕು. ಬಯಸಿದವರಿಗೆ ನೆರವಾಗಬೇಕು. ಅತಿಥಿಗಳನ್ನು ಗೌರವಿಸಿ ಆದರಿಸಬೇಕು. ಸತ್ಯಮಾರ್ಗದಲ್ಲಿ ನಡೆಯುವಾಗ ಅನೇಕ ಸಂಕಷ್ಟಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ಇತರರಿಗೆ ಧೈರ್ಯವನ್ನು ತುಂಬಬೇಕು. ಸಹಾಯವನ್ನು ಮಾಡಬೇಕು. ಮುಖ್ಯವಾಗಿ ಮಾನವನು ನಿಷ್ಪಕ್ಷಪಾತ ಮನೋಧರ್ಮದವನಾಗಿರಬೇಕು.

ಜನತೆಗೆ ಸನ್ಮಾರ್ಗ ದರ್ಶನವಾಗಲಿ ಎಂದು ಪ್ರಾರ್ಥಿಸುವುದು ಪ್ರವಾದಿ ಮುಹಮ್ಮದ್ (ಸ) ಪೈಗಂಬರರ ದಿನಚರಿಯಾಗಿತ್ತು ಪ್ರವಾದಿಯವರ ವಾತ್ಸಲ್ಯಮಯ ವ್ಯಕ್ತಿತ್ವ, ಅವರ ಪಾವನವಾದ ಚಾರಿತ್ರ್ಯ ಮತ್ತು ಅವರ ಸಂದೇಶಗಳಲ್ಲಿ ಇರುವ ಸತ್ಯವು ಎಂಥವರನ್ನೂ ಸೆಳೆಯುತ್ತಿದ್ದವು. ಇಸ್ಲಾಂ ಧರ್ಮದ ವ್ಯಾಪಕ ಪ್ರಚಾರಕ್ಕೆ ಇವೇ ಬುನಾದಿಯಾಗಿದ್ದವು.

ಪೈಗಂಬರರು ಬರಿಯ ಉಪದೇಶವನ್ನಷ್ಟೇ ಮಾಡುತ್ತಿರಲಿಲ್ಲ. ಹೇಳಿದ್ದನ್ನು ಮಾಡಿಯೂ ತೋರಿಸುತ್ತಿದ್ದರು. ಉದಾಹರಣೆಗೆ - ಅವರು ರೋಗಿಗಳ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಶವಸಂಸ್ಕಾರಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಬಡವನಾದರೂ ಗುಲಾಮನಾದರೂ ಆತನ ಆಮಂತ್ರಣವನ್ನು ಸ್ವೀಕರಿಸುತ್ತಿದ್ದರು. ಪ್ರವಾದಿಯವರು ದಯಾಶೀಲರೂ ದಾನಶೀಲರೂ ಅನುಕಂಪವುಳ್ಳವರೂ ಆಗಿದ್ದರು. ದಾನವು ಸಂಪತ್ತನ್ನು ಕಡಿಮೆ ಮಾಡುವುದಿಲ್ಲ ಎಂಬುದು ಅವರ ಖಚಿತ ನುಡಿಯಾಗಿತ್ತು. ಒಬ್ಬ ವ್ಯಕ್ತಿಯನ್ನು ಗೌರವಿಸಲು ಮತ್ತೊಬ್ಬ ವ್ಯಕ್ತಿ ಎದ್ದು ನಿಲ್ಲುವುದು ಸರಿಯಲ್ಲ ಎಂಬ ಪೈಗಂಬರರ ನಿಲುವು ಅವರ ವ್ಯಕ್ತಿತ್ವದ ದೊಡ್ಡತನವನ್ನು ತೋರಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net