ಅಂತರಂಗ: ಬಿಸವೋ ಮೇಣ್ ಸೊದೆಯೋ...

Antaranga vvani
Published on

ಜೀವಯಾತ್ರೆಯಲ್ಲಿ ಮೊದಲು ದುಃಖ ಬರುತ್ತದೆ. ನಂತರ ಸುಖ ಸಿಗುತ್ತದೆ. ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಕನ್ನಡದ ಗಾದೆಮಾತಿದೆ. ಮೊದಲು ಕಷ್ಟ, ನಂತರ ಸುಖ. ಇಂದ್ರಿಯನಿಗ್ರಹ ಕಷ್ಟ. ಇದನ್ನು ಸಾಧಿಸಿದರೆ ನಂತರ ಮನಸ್ಸು ಪ್ರಶಾಂತವಾಗಿರುತ್ತದೆ. ನಮ್ಮ ಹೃದಯದಲ್ಲಿ ನಡೆಯುವ ಸರಿ-ತಪ್ಪುಗಳ ಕಲಹವೇ ದೇವ-ದಾನವರ ಯುದ್ಧ. ಡಿ.ವಿ.ಜಿ. ಸಮುದ್ರಮಥನವನ್ನು ವಿವರಿಸುತ್ತ ಹೀಗೆಂದಿದ್ದಾರೆ:

ದೊರೆಕೊಳ್ವ ಪುರುಳೇನೊ ಬಿಸವೊ ಮೇಣ್ ಸೊದೆಯೊ

ದೊರೆವೆನ್ನಗರಿ ಸೈಸಿ ಬಸವಳಿಯರಾರೋ |

ಜೀವಯಾತ್ರೆಯಲ್ಲಿ ನಿರಂತರವಾಗಿ ಉಳಿದವರಾರೂ ಇಲ್ಲ. ಸುಖವನ್ನು ಅಮೃತವೆಂದೂ, ದುಃಖವನ್ನು ವಿಷವೆಂದೂ ತಿಳಿದರೆ; ಈ ಜೀವನವು ಸುಖ-ದುಃಖಗಳ ಪಯಣವಾಗಿದೆ. ಜೀವಿಯು ಎದುರಾಗುವ ಸನ್ನಿವೇಶವನ್ನು ಯಾವ ಮನೋಭಾವದಿಂದ ಎದುರಿಸುತ್ತಾನೆ ಎಂಬುದು ಬಹಳ ಮುಖ್ಯ ಸಾಧನೆ. ಶತ್ರುವು ಹೊರಗಿದ್ದರೆ ನಾವು ಆತನೊಡನೆ ಪ್ರಯತ್ನಪೂರ್ವಕವಾಗಿ ಸೆಣಸಾಡಬಹುದು. ಆದರೆ ಈ ಸನ್ನಿವೇಶದಲ್ಲಿ ನಮ್ಮ ಶತ್ರು ಹೊರಗಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ, ‘ನಿನ್ನ ಮಿತ್ರ ಹಾಗೂ ಶತ್ರು ನೀನೇ ಆಗಿದ್ದೀಯ’ ಎಂದು ಉಪದೇಶಿಸಿದ್ದಾನೆ. ನಮ್ಮ ಶತ್ರು ನಾವೇ ಆಗಿದ್ದೇವೆ. ಅಂತರಂಗದಲ್ಲಿ ನಡೆಯುವ ಸಮುದ್ರಮಥನದಲ್ಲಿ ‘ಬಿಸ’ ಅಂದರೆ ‘ವಿಷ’ ಹಾಗೂ ‘ಸೊದೆ’ ಅಂದರೆ ‘ಅಮೃತ’ ಎರಡೂ ಅಡಗಿದೆ. ನಾವು ವಿಷಕಂಠರಾಗುವುದೊಂದೇ ಅದಕ್ಕಿರುವ ದಾರಿ. ವಿಷವನ್ನು ತ್ಯಜಿಸಲು ಸಾಧ್ಯವಿಲ್ಲ. ಅದನ್ನು ಅಲಂಕಾರವಾಗಿ ಧರಿಸಿ ಜಗತ್ತಿಗೆ ಹಿತವನ್ನು ಬಯಸಬೇಕು. ಆಚಾರ್ಯ ಶಂಕರರು ಶಿವಾನಂದಲಹರಿಯಲ್ಲಿ ಶಿವನನ್ನು ಸ್ತುತಿಸುತ್ತ, ‘ಹೇ ಶಿವ, ಸಮುದ್ರಮಥನದಲ್ಲಿ ಮೊದಲು ಹುಟ್ಟಿದ ವಿಷವನ್ನು ಕಂಡು ದೇವಾಸುರರು ಓಡಿಹೋದರು. ನೀನು ಆ ವಿಷವನ್ನು ಒಳಕ್ಕೆ ನುಂಗದೆ ಹೊರಕ್ಕೆ ಉಗುಳದೆ ಕಂಠದಲ್ಲಿ ಇರಿಸಿಕೊಂಡೆ. ನಿನ್ನ ಪರಮೋಪಕಾರಕ್ಕೆ ಈ ದೃಷ್ಟಾಂತವೊಂದು ಸಾಲದೆ?’ ಎಂದಿದ್ದಾರೆ. ನಾವು ಹೀಗೆ ಜೀವಿಸಿದರೆ ವಿಷ ಹಾಗೂ ಅಮೃತ ನಮ್ಮನ್ನು ಯಾವದೇ ಬಾಧೆಗೂ ನೂಕುವುದಿಲ್ಲ. ‘ಚಿದಾನಂದರೂಪರಾದ ಶಿವಸ್ವರೂಪರು ನಾವು’ ಎಂಬುದನ್ನು ಗುರುಮುಖೇನ ಅರಿತುಕೊಂಡಾಗ ನಮ್ಮ ಬದುಕು ಧನ್ಯವಾಗುತ್ತದೆ. ಆತ್ಮಸಾಕ್ಷಾತ್ಕಾರವು ವಿಚಾರದಿಂದ ಮಾತ್ರ ಸಾಧ್ಯ. ಹೀಗಾಗಿ ನಮ್ಮನ್ನು ನಾವು ವಿಚಾರದಲ್ಲಿ ತೊಡಗಿಸಿಕೊಳ್ಳಬೇಕು. ಜ್ಞಾನವು ವಿಚಾರವೆಂಬ ಸಮುದ್ರಮಥನದಲ್ಲಿ ಅಮೃತರೂಪವಾಗಿ ಉದಯಿಸಲು ನಮ್ಮ ಜನ್ಮ ಕೃತಕೃತ್ಯವಾಗುತ್ತದೆ. ಮನಸ್ಸು ಶಾಂತವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net