

ಜೀವನದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಅನೇಕ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಜೀವನದ ಪಯಣದಲ್ಲಿ ಅನೇಕ ಬಾರಿ ಎಡವುತ್ತಿರುತ್ತೇವೆ. ಆದರೆ ಕೆಲವೊಮ್ಮೆ ಕೆಲವು ತಪ್ಪುಗಳಿಂದ ಎಡವಿ, ಜೀವನದಲ್ಲಿ ಬಹಳ ಕಷ್ಟನಷ್ಟಗಳನ್ನು ಅನುಭವಿಸುತ್ತಿರುತ್ತೇವೆ. ಇನ್ನು ಕೆಲವು ಒಂದೋ ಅಥವಾ ಎರಡು ತಪ್ಪುಗಳಿಂದ ಇಡೀ ಜೀವನವೇ ಹಾಳಾಯಿತು ಎಂದು ಕೆಲವರು ಹೇಳುವುದನ್ನು ಕೇಳುತ್ತಿರುತ್ತೇವೆ.
ವಿದ್ಯಾರ್ಥಿಯು ಚೆನ್ನಾಗಿ ಜ್ಞಾನಾರ್ಜನೆ ಮಾಡಿ, ಉತ್ತಮ ಅಂಕಗಳನ್ನು ಪಡೆಯಲು ಇಚ್ಛಿಸುತ್ತಾನೆ. ಆಟ, ನಿದ್ರೆ, ಟಿ.ವಿ. ವೀಕ್ಷಣೆಗಳಿಂದ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಮಾಡಲಾಗುವುದಿಲ್ಲ. ಅವರು ಅಥವಾ ಮನೆಯವರು ನಿರೀಕ್ಷಿಸಿದಂತೆ ಒಳ್ಳೆಯ ಅಂಕಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕಾರಣ ನಿದ್ರೆ ಅಥವಾ ಇನ್ನಾವುದೋ ಸುಖಕ್ಕೆ ಬಲಿಯಾಗಿ. ತಾರುಣ್ಯದಲ್ಲಿ, ಯೌವನದಲ್ಲಿ ಯುವಕ-ಯುವತಿಯರು ಮೋಜು, ಮಸ್ತಿಗಳಲ್ಲಿ ನಿರತರಾಗಿ ತಮ್ಮ ಸಾಧನೆಗಳಿಂದ ಚ್ಯುತರಾಗುತ್ತಾರೆ. ಹೆಣ್ಣು, ಜಂಗಮವಾಣಿ, ವೃಥಾ ತಿರುಗುವುದು, ಚಲನಚಿತ್ರ ವೀಕ್ಷಣೆ ಇತ್ಯಾದಿಗಳಿಂದ ಯುವಸಮೂಹವು ದಿಕ್ಕನ್ನು ತಪ್ಪುತ್ತಿದೆ. ಇಲ್ಲ ನಾವು ಸುಖವನ್ನು, ಇಂದ್ರಿಯ ಲೋಲುಪತೆಯನ್ನು ಅರಿಸಿಹೋಗುತ್ತಿರುವುದರಿಂದ. ಅದೇ ರೀತಿ ಅನೇಕರು ತಾವು ಐಎಎಸ್, ವೈದ್ಯ, ಇಂಜಿನಿಯರ್ ಆಗಬೇಕೆಂದು, ಉತ್ತಮ ಕ್ರೀಡಾಪಟು, ಉತ್ತಮ ಲೇಖಕ, ಉತ್ತಮ ವಾಗ್ಮಿ ಇತ್ಯಾದಿ ಆಗಬೇಕೆಂದು ಗುರಿಯನ್ನು ಇರಿಸಿಕೊಂಡು ಪ್ರಯತ್ನ ಮಾಡುವಲ್ಲಿ ವಿಫಲರಾಗುತ್ತಾರೆ. ಇವೆಲ್ಲದಕ್ಕೂ ಕಾರಣ, ಪ್ರಾಯಶಃ ಅವರು ಸರಿಯಾದ ಸಮಯದಲ್ಲಿ, ಸಮರ್ಪಕವಾಗಿ ಪ್ರಯತ್ನ ಮಾಡುವಲ್ಲಿ ಅಸಮರ್ಥರಾಗುತ್ತಾರೆ. ಅವರ ಮನಸ್ಸುಗಳು ಇಂದ್ರಿಯ ಲೋಲುಪತೆಯಲ್ಲಿ ಮುಳುಗಿ ಹೋಗುತ್ತವೆ. ಇದರಿಂದ ಅವರ ಇಚ್ಛಾಶಕ್ತಿಯ ಅಭಿವ್ಯಕ್ತಿಯೂ ಕುಂದುತ್ತದೆ. ನಮ್ಮ ಅಸಫಲತೆಗೆ ಇದೇ ಮುಖ್ಯ ಕಾರಣ. ನಾವು ಸುಖವನ್ನು ಅರಸುವ ಬದಲು, ಆನಂದವನ್ನು ಪಡೆಯಲು ಇಚ್ಛಿಸಬೇಕು. ಅದು ಜ್ಞಾನದಿಂದ, ಗುರಿಯನ್ನು ಮುಟ್ಟುವುದರಿಂದ ಮಾತ್ರ ಸಾಧ್ಯ.