

ಜಗದಲ್ಲಿ ಪ್ರತಿ ವಸ್ತುವೂ ಅಮೂಲ್ಯ. ಈ ಜಗತ್ತು ದೇವರ ಅಪೂರ್ವ ಕಲಾಕೃತಿ. ಮನುಷ್ಯ ಕತ್ತಲಲ್ಲಿ ಬದುಕಬಾರದು. ಆಧ್ಯಾತ್ಮಿಕ ಅರಿವಿನ ಬೆಳಕಿನಲ್ಲಿ ಮುಂದಡಿ ಇಡುವುದು ಶ್ರೇಯಸ್ಕರ. ದೃಷ್ಟಿಯಂತೆ ಸೃಷ್ಟಿ ಎಂಬ ಗಾದೆಮಾತೊಂದಿದೆ. ಕಣ್ಣು ತೆರೆದು ನೋಡಬೇಕು. ಅನುಭವಿಸಬೇಕು ಮತ್ತು ಆನಂದಿಸಬೇಕು. ಜಗತ್ತು ಕತ್ತಲಲ್ಲಿ ಮುಳುಗಿದೆ ಎಂದು ಭಾವಿಸಬಾರದು. ನಾವು ನೋಡುವ ಕಣ್ಣಲ್ಲಿ ಕತ್ತಲೆ ತುಂಬಿರಬೇಕು. ನಮ್ಮ ಮನೆಯ ಮನದ ದೀಪ ಆರಿರಬಹುದು. ಅದರೆ ಜಗತ್ತಿಗೆ ಬೆಳಕು ನೀಡುವ ಸೂರ್ಯ-ಚಂದ್ರರು ಎಂದಾದರೂ ಆರಿರಲು ಸಾಧ್ಯವೇ? ದೇಶ-ಧರ್ಮಗಳು ಭಿನ್ನವಾದರೂ ಜಗತ್ತಿಗೆ ಅಧ್ಯಾತ್ಮ ಒಂದೇ ಆಗಿದೆ. ನಮ್ಮ ದೃಷ್ಟಿ ಸರಿಯಿದ್ದರೆ ಜಗತ್ತು ಸುಂದರವಾಗಿ ಕಾಣುತ್ತದೆ.
ಅಧ್ಯಾತ್ಮ ಅಂದರೆ ಬೆಳಕು ಎಂದರ್ಥ. ಬೆಳಕು ಯಾರ ಬದುಕಿಗೆ ಬೇಡ? ಆ ಚಿದ್ಬೆಳಕು ಎಲ್ಲರಿಗೂ ಬೇಕು. ಇದು ಮನುಷ್ಯನ ಬದುಕನ್ನು ಬೆಳಗುತ್ತದೆ. ಹೇಳುವ ರೀತಿ-ಆಚರಿಸುವ ರೀತಿ ಭಿನ್ನವಾದರೂ ಸರ್ವಧರ್ಮಗಳ ತಿರುಳು, ಕೊನೆಯ ಗುರಿ ಒಂದೇ. ಅರಿಯುವ ಮನುಷ್ಯನ ಬುದ್ಧಿ-ಭಾವನೆಗಳು ವಿಶಾಲಗೊಂಡಿರಬೇಕು. ದೊಡ್ಡ ದೊಡ್ಡ ಗ್ರಂಥ ಓದಿ ಅದರಂತೆ ನಡೆಯದಿದ್ದರೆ ಓದಿದ್ದಕ್ಕೆ ಯಾವ ಪ್ರತಿಫಲವೂ ಸಿಗದು. ಮನುಷ್ಯನಾಗಿ ಹುಟ್ಟಿ ದೇವಮಾನವನಾಗಿ ಬಾಳಬೇಕೆಂದು ಜಗದ್ಗುರು ಶ್ರೀ ರೇಣುಕಾಚಾರ್ಯರು ಬೋಧಿಸಿದ್ದಾರೆ. ‘ನನಗೆ ಮಣ್ಣು-ನೀರು ಕೊಡಿ. ನನ್ನಲ್ಲಿರುವ ಸಾಮರ್ಥ್ಯ-ಶಕ್ತಿ ತೋರಿಸುತ್ತೇನೆ’ ಎನ್ನುತ್ತದೆ ಬೀಜ. ಅದರಂತೆ ಮನುಷ್ಯನಲ್ಲಿಯೂ ಅದ್ಭುತ ಶಕ್ತಿಯಿದೆ. ಅದುವೇ ಅಧ್ಯಾತ್ಮದ ಜ್ಞಾನನಿಧಿ. ಹೃದ್ಭೂಮಿಯಲ್ಲಿ ಅಧ್ಯಾತ್ಮದ ಬೀಜವನ್ನು ನೆಟ್ಟರೆ ಅದು ಸತ್ಪಲ ಕೊಟ್ಟೇ ಕೊಡುತ್ತದೆ.