ಅಂತರಂಗ: ಸತ್ಸಂಗವೆಂಬ ಶಾಂತಿಯ ತೋಟ

Antaranga vvani
Published on
ಜಗತ್ತು ವಿಶಾಲ ಮತ್ತು ಸಂಪದ್ಭರಿತ. ಬದುಕಿಗೆ ಭಗವಂತ ಕೊಟ್ಟ ಕೊಡುಗೆಗೆ ಸಮಾನವಾದುದು ಇನ್ನೊಂದಿಲ್ಲ. ಪಶು, ಪಕ್ಷಿ, ಪ್ರಾಣಿಗಳು ಬಡವ-ಬಲ್ಲಿದ ಎಂದು ಬಳಲಿದ್ದು ಇಲ್ಲವೇ ಇಲ್ಲ. ಆದರೆ ಮನುಷ್ಯನು ಧನಕನಕ, ವಸ್ತು, ವಾಹನ ಗಳಿಸಿ ತಾನೇ ಸಿರಿವಂತನೆಂದು ಹೇಳುತ್ತಾನೆ. ಕಸ ಗುಡಿಸಿ ಮನೆಯ ಅಂಗಳವನ್ನು ಹಸನುಗೊಳಿಸಬಹುದು. ಆದರೆ ಮನದ ಅಂಗಳವನ್ನು ಹಸನಗೊಳಿಸುವುದು ಅಷ್ಟು ಸುಲಭವಲ್ಲ. ಸತ್ಸಂಗವೆಂಬ ಶಾಂತಿಯ ತೋಟದಲ್ಲಿ ಪ್ರೀತಿ, ವಿಶ್ವಾಸ, ಕಾರುಣ್ಯ, ವಾತ್ಸಲ್ಯ, ಸೌಹಾರ್ದತೆ ಮೊದಲಾದ ಗುಣಗಳನ್ನು ಬೆಳೆಸಿಕೊಂಡಾಗ ಜೀವನದಲ್ಲಿ ಪರಮ ಸಂತಸ, ನೆಮ್ಮದಿ ಪಡೆಯಲು ಸಾಧ್ಯವಾಗುತ್ತದೆ.

ನಮ್ಮ ದೇಶದಲ್ಲಿ ನೀರು, ಗಾಳಿ, ಆಹಾರ ಕೆಟ್ಟಿಲ್ಲ. ಆದರೆ ಮನುಷ್ಯನ ಮನಸ್ಸು ಕೆಟ್ಟಿದೆ. ಹೃದಯ ಕಲುಷಿತಗೊಂಡಿದೆ. ಹೂದೋಟದ ಹೂಗಳು ಎಲ್ಲರಿಗೂ ಸುಗಂಧ ಕೊಡುತ್ತವೆ. ಹೂದೋಟದೊಳಗೆ ಹೋಗಿಬಂದ ನಂತರ ಮನುಷ್ಯ ಜೀವನ ಪರಿವರ್ತನೆಯಾಗಬೇಕು. ನೋಡುವ ಕಣ್ಣು, ಮನಸ್ಸು ಮತ್ತು ಜೀವನಕ್ರಮ ಬದಲಾಗಬೇಕು.

ಹಣದ ಹುಚ್ಚು ಹಿಡಿದವರಿಗೆ ಗುರುಹಿರಿಯರಿಲ್ಲ. ಹಸಿದವನಿಗೆ ರುಚಿ ಬೇಕೆಂದಿಲ್ಲ. ಚಿಂತೆ ಹಿಡಿದವರಿಗೆ ನಿದ್ರೆಯಿಲ್ಲ, ಸುಖವಿಲ್ಲ. ಭೋಗದ ಬೆಟ್ಟವೇರಿದ ಮನುಜನಿಗೆ ರೋಗ ಕಟ್ಟಿಟ್ಟ ಬುತ್ತಿ. ತ್ಯಾಗಮನೋಭಾವನೆಯಿಂದ ಸಿಗುವುದು ನಿತ್ಯ ಸಂತೃಪ್ತಿ. ಜಗತ್ತು ನಾನಾ ಬಗೆಯ ದುಃಖಗಳಿಂದ ತುಂಬಿದೆ. ಕ್ಷಮಾಗುಣವಿದ್ದರೆ ಕವಚದ ಹಂಗಿಲ್ಲ. ರೋಗವಿದ್ದರೆ ಶತ್ರು ಇದ್ದಂತೆ. ಉತ್ತಮ ಸ್ನೇಹಿತರಿದ್ದರೆ ದಿವ್ಯೌಷಧ ಇದ್ದಂತೆ. ಪರಿಶುದ್ಧ ವಿದ್ಯೆ ಇದ್ದರೆ ಹಣದ ಆವಶ್ಯಕತೆ ಇಲ್ಲ. ಕ್ರೋಧದಿಂದ ಬುದ್ಧಿ, ಅಹಂಕಾರದಿಂದ ಜ್ಞಾನ, ಪ್ರಾಯಶ್ಚಿತ್ತದಿಂದ ಪಾಪ, ಮೋಹದಿಂದ ಮರ್ಯಾದೆ, ಚಿಂತೆಯಿಂದ ಆಯುಷ್ಯ ನಾಶವಾಗುತ್ತದೆ.

‘ನನ್ನದು ನನ್ನದೇ, ನಿನ್ನದೂ ನನ್ನದೇ’ ಎನ್ನುವವನು ದುರ್ಜನರು. ‘ನನ್ನದು ನನ್ನದು, ನಿನ್ನದು ನಿನ್ನದೇ’ ಎನ್ನುವವನು ಸಾಮಾನ್ಯನು. ‘ನನ್ನದು ನಿನ್ನದೇ, ನಿನ್ನದು ನಿನ್ನದೇ’ ಎನ್ನುವವರು ನಿಜವಾದ ಮಹಾತ್ಮರು. ಈ ದೇಹವೆಂಬ ರಥಕ್ಕೆ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮಗಳೆಂಬ ಐದು ಕುದುರೆಗಳು. ಮನವೆಂಬುದು ಕಡಿವಾಣ. ವಿವೇಚನೆಯೇ ಅದರ ಶಕ್ತಿ. ನಾವು ಯಜಮಾನರಲ್ಲ. ಅದರಲ್ಲಿ ಕುಳಿತ ಪಯಣಿಗರು. ಅಭ್ಯಾಸದಿಂದ ವಿದ್ಯೆ, ಆಚರಣೆಯಿಂದ ಬುದ್ಧಿ, ಪ್ರಯತ್ನದಿಂದ ಸಂಪತ್ತು, ಭಾಗ್ಯದಿಂದ ಫಲ ದೊರಕುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net