ಇದು 'ಅಂತರಂಗ'ದ ಮಥನ: ದ್ವಂದ್ವಗಳ ನಡುವೆ...

Antaranga vvani
Published on

ನಸ್ಸಿನ ಸ್ವಭಾವವನ್ನು ಅರಿಯಲು ನಾವು ಪ್ರಯತ್ನಿಸಿದಷ್ಟೂ ಆ ಮನಸ್ಸು ನಮಗೆ ಹೊಸದಾಗಿ ಗೋಚರವಾಗುತ್ತ, ನಮಗೆ ಆಶ್ಚರ್ಯವನ್ನುಂಟುಮಾಡುತ್ತದೆ. ಇಂದಿನ ಆಸಕ್ತಿಗಳು ನಾಳೆಗೆ ನಿರಾಸಕ್ತಿ. ಇಂದಿನ ದ್ವೇಷಗಳು ನಾಳೆಗೆ ಪ್ರೀತಿ. ಇಂದಿನ ಬೇಡಗಳು ನಾಳೆಗೆ ಬೇಕಾಗುತ್ತದೆ. ಇದೇ ಮನಸ್ಸಿನ ವೈಚಿತ್ರ್ಯ ಒಂದು ವಿಷಯದಲ್ಲಿ ಮನಸ್ಸು ನಿಲ್ಲುವುದಿಲ್ಲ. ಅದರ ಬಯಕೆಗಳು ನಿತ್ಯನೂತನ. ಆಚಾರ್ಯ ಶಂಕರರು ಶತಶ್ಲೋಕಿಯಲ್ಲಿ ಮಾಯೆಯ ಸ್ವರೂಪವನ್ನು ವಿವರಿಸುತ್ತ ಆ ಮಾಯೆಗೆ ನಾಲ್ಕು ಗುಣಗಳನ್ನು ಚಿತ್ರಿಸಿದ್ದಾರೆ. ಮಾಯೆ ನಿತ್ಯನೂತನ ಯುವತಿ. ಅದಕ್ಕೆ ಮುಪ್ಪು ಬರುವುದಿಲ್ಲ. ಮಾಯೆ ಬಹಳ ಕುಶಲಿ. ಅದು ನಡೆಯದಿರುವುದನ್ನು ನಡೆದಂತೆ ತೋರಿಸಿ ನಂಬಿಸುತ್ತದೆ. ಮಾಯೆಯು ಸರ್ವವೂ ಆರಂಭದಲ್ಲಿ ಬಹಳ ಇಷ್ಟವಾಗಿ ಮಧುರವಾಗಿರುವಂತೆ ತೋರಿಸುತ್ತದೆ. ನಾವು ಎಚ್ಚರಿಕೆಯಿಂದ ಜೀವಿಸಲು ಎಷ್ಟೇ ಜ್ಞಾನವನ್ನು ಸಂಪಾದಿಸಿದರೂ ಆ ಜ್ಞಾನವನ್ನು ಮುಚ್ಚುತ್ತದೆ. ಮಾಯೆ ಎಂದರೆ ನಮ್ಮ ಮನಸ್ಸು. ಮೇಲೆ ವಿವರಿಸಿದ ಮಾಯೆಯ ಎಲ್ಲ ಕಾರ್ಯಗಳನ್ನು ಮನಸ್ಸು ಮಾಡುತ್ತದೆ. ಪೂಜ್ಯ ಡಿ.ವಿ.ಜಿ. ಮನಸ್ಸನ್ನು ವಿಶ್ಲೇಷಿಸುತ್ತ ಹೀಗೆಂದಿದ್ದಾರೆ:

ಒಂದರಲಿ ನಿಲಲೊಲದೆ ದ್ವಂದ್ವಗಳ ನಡುವೆ,

ಹಿಂದುಮುಂದಲೆದಾಡಿ ನೊಂದಿಹನು ಬರಿದೆ

ಒಂದು ವಿಷಯದಲ್ಲಿ ಹೆಚ್ಚು ಕಾಲ ಮನಸ್ಸನ್ನು ನಿಲ್ಲಿಸಿದಾತನು ಋಷಿಯೋ, ಜ್ಞಾನಿಯೋ ಅಥವಾ ಮಹಾತ್ಮನಾಗುತ್ತಾನೆ. ಋಷಿ ಹಾಗೂ ಮಹಾತ್ಮರ ವಿಶೇಷವೇನೆಂದರೆ ಅವರು ಒಂದು ವಿಷಯದಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅವರಿಗೆ ಇನ್ನೊಂದು ವಸ್ತು ದ್ವಂದ್ವವನ್ನು ಉಂಟುಮಾಡುವುದಿಲ್ಲ. ಸಾಮಾನ್ಯರು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆದು ದುಃಖಿಗಳಾಗುತ್ತಾರೆ. ದ್ವಂದ್ವವೇ ಸಾಮಾನ್ಯರ ಬದುಕಾಗಿರುತ್ತದೆ. ಸರಿಯಾದ ಮಾರ್ಗವನ್ನು ಅರಿತಿದ್ದರೂ ಅದರಲ್ಲಿ ನಡೆಯದೆ ಜೀವಿಸುತ್ತಾರೆ. ತಪ್ಪು ಯಾವುದೆಂದು ತಿಳಿದಿದ್ದರೂ ಅದನ್ನು ತಡೆಯದೆ ತಾವೂ ಅದರಲ್ಲಿ ಪಾಲ್ಗೊಳ್ಳುತ್ತಾರೆ. ಈ ರೀತಿ ಜೀವಿಸುವ ವ್ಯಕ್ತಿಯು ದ್ವಂದ್ವದಲ್ಲಿ ಸಿಲುಕಿರುತ್ತಾನೆ. ಆತ ನೊಂದ ಜೀವಿಯಾಗಿರುತ್ತಾನೆ. ಹೊಸ ಕರು ಹುಲ್ಲನ್ನು ಮೇಯಲು ಹುಲ್ಲುಗಾವಲಿಗೆ ಹೋದಾಗ ಅಲ್ಲಿ ಹೆಚ್ಚು ಹುಲ್ಲಿದೆ ಎಂದು ಅರಿತು ಸಾಗುತ್ತದೆ. ಅಲ್ಲಿ ಕೆಲಕಾಲ ತಿಂದ ತಕ್ಷಣ ಅದಕ್ಕೆ ದೂರದಲ್ಲಿ ಹೆಚ್ಚು ಹುಲ್ಲು ಕಾಣುತ್ತದೆ. ಹೀಗೆ ಸಂಜೆಯವರೆಗೆ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆದು ದಣಿಯುತ್ತದೆ. ನಾವು ಮನಸ್ಸನ್ನು ದ್ವಂದ್ವಗಳಿಂದ ಮುಕ್ತವಾಗಿಸದಿದ್ದರೆ ನೊಂದು ಜೀವಿಸಬೇಕಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net