

ಕುವೆಂಪು ತಮ್ಮ ಒಂದು ಕವನದಲ್ಲಿ ಪ್ರಕೃತಿಯನ್ನು ವಿವರಿಸುತ್ತ, ಇಂದ್ರಿಯಗಳ ಧನ್ಯತೆಯನ್ನು ಕೊಂಡಾಡಿದ್ದಾರೆ. ನಾನು ದೇಹವೆಂಬ ದೇಗುಲದ ಇಂದ್ರಿಯ ದ್ವಾರಗಳನ್ನು ಸದಾ ತೆರೆದಿರುತ್ತೇನೆ. ಗಾಳಿಯ ರೂಪದಿ, ಬೆಳಕಿನ ರೂಪದಿ ದಿನ ದಿನ ಶಿವ ಸಂಚರಿಪನು ಎಂದಿದ್ದಾರೆ. ಬದುಕನ್ನು ನಿರಾಕರಿಸಿದವ ಎಂದಿಗೂ ಬಾಳಿನಲ್ಲಿ ಆನಂದದಿಂದ ಜೀವಿಸಲಾರ.
ಮಾನವ ಜನ್ಮದಲ್ಲಿ ಮಾತ್ರ ಹಲವಾರು ಅವಕಾಶಗಳು ನಮಗಿವೆ. ಕಸವನ್ನು ರಸವಾಗಿಸುವ ಸೂಕ್ಷ್ಮತೆ ಮಾನವನಿಗೆ ಮಾತ್ರವಿದೆ. ಈ ವಾಸ್ತವವನ್ನು ಯಾರು ಅರಿಯರೋ ಅವರು ಖಂಡಿತವಾಗಿ ಬಡವರು. ನಮ್ಮ ಇಂದ್ರಿಯಗಳನ್ನು ಸರಿಯಾಗಿ ಉಪಯೋಗಿಸುವ ಕುಶಲತೆಯು ಜಾಗೃತವಾದಾಗ ಇದೇ ಇಂದ್ರಿಯಗಳು ಯಶಸ್ಸಿನತ್ತ ಸಾಗಲು ದಾರಿದೀಪವಾಗುತ್ತವೆ.