

ಪಾ.ಶ್ರೀ.ಅನಂತರಾಮ್ ಕೋಲಾರ: ನಗರದಿಂದ 3.7 ಕಿಮೀ ದೂರದ ಅಂತರಗಂಗೆ ಬೆಟ್ಟಕ್ಕೆ ತನ್ನದೇ ಖ್ಯಾತಿ ಇದೆಯಾದರೂ ಇಲ್ಲಿನ ಪುರಾಣ ಪ್ರಸಿದ್ಧ ಕಾಶಿ ವಿಶ್ವನಾಥಸ್ವಾಮಿಯ ಭಕ್ತರಿಗೆ, ಬೆಟ್ಟದಲ್ಲಿನ ಪ್ರಕೃತಿ ಸೊಬಗನ್ನು ಸವಿಯಲು ಬರುವ ಪ್ರವಾಸಿಗರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಸರ್ಕಾರ ಉದಾಸೀನ ತೋರಿರುವುದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಶತಶೃಂಗ ಪರ್ವತಗಳ ಸಾಲಿಗೆ ಸೇರಿದ ಬೆಟ್ಟ ಸಮುದ್ರ ಮಟ್ಟಕ್ಕಿಂತ 4026 ಅಡಿ ಎತ್ತರವಿದ್ದು ಸುಮಾರು 3000 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಗಿಡ-ಮರ, ಪ್ರಾಣಿ-ಪಕ್ಷಿಗಳು, ಸುಂದರವಾದ ಶಿಲೆಗಳನ್ನು ಒಳಗೊಂಡ ಗಿರಿಧಾಮಗಳಲ್ಲೊಂದಾಗಿದೆ.
ಈ ಬೆಟ್ಟ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಇಲ್ಲಿನ ಉನ್ಮಾನ್ ತಾತನ ದರ್ಗಾ ಭಾವೈಕ್ಯತೆಯ ಸಂಕೇತವಾಗಿದೆ, ಆದರೆ ಕಳೆದ 15 ವರ್ಷಗಳಲ್ಲಿ ಕೆಲ ರಿಯಲ್ ಎಸ್ಟೇಟ್ ಮಾಲೀಕರು, ಕಲ್ಲು ಗಣಿಗಾರಿಕೆ ಉದ್ಯಮಿಗಳು ಬೆಟ್ಟದಲ್ಲಿನ ಸಂಪತ್ತು ಅತಿಕ್ರಮಿಸಿಕೊಂಡು ಕಾಂಕ್ರಿಟ್ ನಾಡಾಗಿಸಲು ಮಾರ್ಗ ಕಂಡುಕೊಂಡಿರುವುದರಿಂದ ಅರಣ್ಯ ಸಂಪತ್ತಿಗೆ, ಪ್ರಕೃತಿ ಸೊಬಗಿಗೆ, ಜಲ ಮೂಲಗಳಿಗೆ ಧಕ್ಕೆಯಾಗಿದೆ.
ಬೆಟ್ಟ ಅರಣ್ಯ ಇಲಾಖೆಗೆ ಸೇರಿದ್ದು. ಕೇವಲ ಸಸಿ ನೆಡುವ ಚಟುವಟಿಗಳಿಗೆ ಹಣ ಖರ್ಚು ಮಾಡಲಾಗುತ್ತಿದೆಯೇ ಹೊರತು ಅರಣ್ಯ ಸಂರಕ್ಷಣೆಗೆ ಇಚ್ಛಾಶಕ್ತಿ ತೋರುತ್ತಿಲ್ಲವೆಂಬುದು ಜನರ ಅಳಲು. ಬೆಟ್ಟದಲ್ಲಿ ನೆಲೆಸಿರುವ ಕಾಶಿ ವಿಶ್ವನಾಥ ದೇವಾಲಯವನ್ನು ಪಾಂಡವರ ಕಾಲದಲ್ಲಿ ಶ್ರೀಕೃಷ್ಣ ಸ್ಥಾಪಿಸಿದ್ದಾನೆಂಬ ಪ್ರತೀತಿ, ಈ ದೇವಾಲಯ ಶಿಥಿಲಗೊಂಡಿದೆ. ಅರಣ್ಯ ಇಲಾಖೆ, ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಜೀರ್ಣೋದ್ಧಾರ ಮಾಡಲು ಅವಕಾಶವಿದ್ದರೂ ಗಮನಹರಿಸಿಲ್ಲ.
ಪ್ರತಿದಿನ ಬೆಟ್ಟಕ್ಕೆ ಕನಿಷ್ಠ 200 ಜನ ವಾಯು ವಿಹಾರಕ್ಕೆ ಬಂದು, ದೇವಾಲಯದ ಪಕ್ಕದಲ್ಲಿರುವ ಅಂತರಗಂಗೆಯಲ್ಲಿ ಮಿಂದು ದೇವರ ದರ್ಶನದ ಜತೆಗೆ ಕುಡಿಯಲು ಇದೇ ನೀರು ಉಪಯೋಗಿಸುತ್ತಿದ್ದಾರೆ. ಪ್ರತಿ ಸೋಮವಾರ ಭಕ್ತರ ಸಂಖ್ಯೆ 250ರಿಂದ 300 ಇರುತ್ತದೆ, ಕಾರ್ತಿಕ ಮಾಸ, ಕಡೆ ಕಾರ್ತಿಕ ಸೋಮವಾರ, ಶಿವರಾತ್ರಿ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುವುದುಂಟು.
ಬೇಕಿರುವುದೇನು?: ದೇವಾಲಯ ಜೀರ್ಣೋದ್ಧಾರ, ಅನ್ನ ಛತ್ರ ನಿರ್ಮಾಣ, ಹಾಳಾಗಿರುವ ಮೆಟ್ಟಿಲು ದುರಸ್ತಿ. ಆಸನ ವ್ಯವಸ್ಥೆ, ವಾಹನ ಪಾರ್ಕಿಂಗ್, ಪೊಲೀಸ್ ಠಾಣೆ. ಪ್ರವಾಸಿಗರು ದಾರಿ ತಪ್ಪುವುದನ್ನು ತಡೆಯಲು ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಗೈಡ್‌ಗಳ ನೇಮಕ. ಮಳೆ ನೀರು ಪೋಲಾಗದಂತೆ ಕಾಲುವೆ ನಿರ್ಮಾಣ ಹಾಗೂ ಹಾಲಿ ಇರುವ ಕಾಲುವೆ ಒತ್ತುವರಿ ತೆರವು. ತಿಂಗಳಿಗೊಮ್ಮೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ. ಕಾಡು ಪ್ರಾಣಿಗಳ ಹಾವಳಿ ತಡೆ ಮತ್ತು ಸಂರಕ್ಷಣೆಗೆ ಕ್ರಮ. ಅಂತರಗಂಗೆ ಬೆಟ್ಟದಿಂದ ತೇರಹಳ್ಳಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ. ಚಾರಣಕ್ಕೆ ಬರುವವರಿಗೆ ಯಾತ್ರಿ ನಿವಾಸ. ಕೋಲಾರದಿಂದ ಬೆಟ್ಟದ ತಪ್ಪಲಿನವರೆಗೆ ಸಾರಿಗೆ ವ್ಯವಸ್ಥೆ. ಇವುಗಳನ್ನು ಮಾಡುವುದರಿಂದ ಪ್ರವಾಸಿಗರಿಗೆ ಅನುಕೂಲ ಮಾತ್ರವಲ್ಲ ಸರ್ಕಾರಕ್ಕೂ ಒಂದಿಷ್ಟು ಆದಾಯ ಸಿಗಲಿದೆ.
ಅನೈತಿಕ ಚಟುವಟಿಕೆ: ಬೆಟ್ಟದಲ್ಲಿ ಅನೈತಿಕ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಪೊಲೀಸ್ ಬೀಟ್ ಹೆಚ್ಚಿಸಬೇಕು, ಬೆಟ್ಟದ ತಪ್ಪಲಿನಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಯೋಗ್ಯರಿಗೆ ಪ್ರವೇಶದ ಜತೆಗೆ ಕನಿಷ್ಠ ಪ್ರವೇಶ ಶುಲ್ಕ ಸಂಗ್ರಹಣೆ ಮಾಡಿದಲ್ಲಿ ಅಕ್ರಮ ತಡೆಯಬಹುದು. ದಿನನಿತ್ಯ ವಾಯುವಿಹಾರಕ್ಕೆ, ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಮಾಸಿಕ ಪಾಸ್ ನೀಡಿ, ಪ್ರತಿ ತಿಂಗಳು ರಿನಿವಲ್ ಮಾಡಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ತಂದಲ್ಲಿ ಅನಧಿಕೃತ ಚಟುವಟಿಕೆಗಳಿಗೆ ಇತಿಶ್ರೀ ಹಾಡಬಹುದೆಂಬುದು ಜನರ ಒತ್ತಾಸೆಯಾಗಿದೆ.
ಅಂತರಗಂಗೆ ಬೆಟ್ಟಕ್ಕೆ ಬರುವ ಭಕ್ತರಿಗೆ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಸೌಕರ್ಯ ಕಲ್ಪಿಸಬೇಕು, ಬೆಟ್ಟದಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಅನೈತಿಕ ಚಟುವಟಿಕೆ ತಪ್ಪಿಸಲು ಭದ್ರತೆ ಹೆಚ್ಚಿಸಬೇಕು, ದೂರದ ಊರುಗಳಿಂದ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆಗೆ ಮುಜರಾಯಿ ಇಲಾಖೆ ಮುಂದಾಗಬೇಕು. ಬಾಲಾಜಿ, ಮುಖಂಡ, ಬಜರಂಗದಳ, ಕೋಲಾರ ಅಂತರಗಂಗೆ ಬೆಟ್ಟ ಮತ್ತು ತೇರಹಳ್ಳಿ ಬೆಟ್ಟದಲ್ಲಿ ಚಾರಣ ಮಾಡುವವರಿಗೆ ಮಾರ್ಗದರ್ಶನ ನೀಡಲು ಹಾಗೂ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ, ಬೆಟ್ಟದಲ್ಲಿ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಲು ಡಿಸಿ ಗಮನಕ್ಕೆ ತರಲಾಗಿದ್ದು ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ಬೆಟ್ಟದಲ್ಲಿ ಧ್ವನಿ ಮತ್ತು ಬೆಳಕು ಯೋಜನೆ ಜಾರಿಗೆ ತರುವ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇ.ಶಿವಶಂಕರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಕೋಲಾರ