ಮತ್ತೊಂದು ವೈರಸ್ ಭಾರತದಲ್ಲಿ ಆತಂಕ

ವಿಜಯವಾಣಿ (3)
Published on

ಕರೊನಾ ಸಾಂಕ್ರಾಮಿಕ ಕಾಣಿಸಿಕೊಂಡ ಚೀನಾದಲ್ಲಿ ಐದು ವರ್ಷಗಳ ಬಳಿಕ ಮತ್ತೊಂದು ವೈರಸ್ ಹಾವಳಿ ಆರಂಭವಾಗಿದೆ. ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್​ಎಂಪಿವಿ) ಬಾಧಿತರು ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತದಲ್ಲೂ ಎಚ್​ಎಂಪಿವಿಯ ಆರು ಪ್ರಕರಣಗಳು ಪತ್ತೆಯಾಗಿ, ಒಂದಷ್ಟು ಆತಂಕ ಮೂಡಿದೆ. ಆದರೆ, ಇದು ಮಾರಣಾಂತಿಕ ವೈರಸ್ ಅಲ್ಲ, ಜನರು ಜಾಗ್ರತೆ ವಹಿಸಿದರೆ ಸಾಕು ಎಂಬ ಸ್ಪಷ್ಟ ಅನಿಸಿಕೆ ಆರೋಗ್ಯ ತಜ್ಞರದ್ದು. ಈ ಎಲ್ಲ ಬೆಳವಣಿಗೆಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಎಚ್​ಎಂಪಿಯ ಆರು ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ವೈದ್ಯಕೀಯ ನಿಗಾವನ್ನು ತೀವ್ರಗೊಳಿಸಿದೆ ಮತ್ತು ವೈರಾಣುವಿನ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮಾಹಿತಿ ಪಡೆದುಕೊಳ್ಳಲು ಮುಂದಾಗಿದೆ. ಆದರೆ, ಇದು ಹೊಸ ವೈರಾಣುವಲ್ಲ ಮತ್ತು ಅಪಾಯಕಾರಿಯೂ ಅಲ್ಲ. ಹೀಗಾಗಿ, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ನ್ಯಾಶನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, 2001ರಲ್ಲಿ ನೆದರ್​ಲ್ಯಾಂಡ್​ನಲ್ಲಿ ಸಂಶೋಧಕರು ಮೊದಲ ಬಾರಿಗೆ ಈ ವೈರಾಣುವನ್ನು (ಎಚ್​ಎಂಪಿವಿ) ಕಂಡುಹಿಡಿದರು. ಆದರೆ, ಇದು ಕನಿಷ್ಠ 50 ವರ್ಷಗಳ ಹಳೆಯ ವೈರಸ್ ಎನ್ನುತ್ತಾರೆ ಕೆಲ ವೈದ್ಯಕೀಯ ತಜ್ಞರು. ಅಲ್ಲದೆ, ಈವರೆಗೆ ಈ ವೈರಾಣುವಿನ ಹೊಸ ತಳಿ ಕಾಣಿಸಿಕೊಂಡಿಲ್ಲ ಎಂಬುದು ಸಮಾಧಾನಕರ ವಿಷಯ.

ವಿಶ್ವ ಆರೋಗ್ಯ ಸಂಸ್ಥೆ ಈವರೆಗೆ ಈ ವೈರಾಣುವಿನ ಕುರಿತಂತೆ ಯಾವುದೇ ಸೂಚನೆ ಹೊರಡಿಸಿಲ್ಲ. ಮಕ್ಕಳಲ್ಲಿ ತೀವ್ರವಾದ ಉಸಿರಾಟದ ಸೋಂಕಿಗೆ ಎಚ್​ಎಂಪಿ ಕಾರಣವಾಗುತ್ತದೆ ಎಂದಿವೆ ಅಧ್ಯಯನ ವರದಿಗಳು. ಕಳೆದ ವರ್ಷವೂ ಚೀನಾದಲ್ಲಿ ಈ ವೈರಾಣು ವ್ಯಾಪಿಸಿರುವ ಸುದ್ದಿಗಳು ಹರಿದಾಡಿದ್ದವು. 2023ರಲ್ಲಿ ಅಮೆರಿಕ, ನೆದರ್​ಲ್ಯಾಂಡ್, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಎಚ್​ಎಂಪಿ ಕಾಣಿಸಿಕೊಂಡಿತ್ತು. ವೈರಸ್​ನ ಪರಿಣಾಮ ಸಾಮಾನ್ಯವಾಗಿದ್ದರೆ ಶೀತ, ಜ್ವರ ಕಾಣಿಸಿಕೊಳ್ಳುತ್ತದೆ. ಆದರೆ, ವೈರಸ್ ತೀವ್ರವಾಗಿ ಬಾಧಿಸಿ, ಸೋಂಕು (ಇನ್​ಫೆಕ್ಷನ್) ಸೃಷ್ಟಿಸಿದ್ದರೆ ನ್ಯುಮೋನಿಯಾದಂಥ ಉಸಿರಾಟ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ತಜ್ಞರು ಹೇಳುವುದೇನು?

ಪ್ರತಿವರ್ಷ ಚಳಿಗಾಲ ಬಂದಾಗ ಅದರಲ್ಲೂ ಚಳಿಯ ತೀವ್ರತೆ ಹೆಚ್ಚಾದಾಗ ಜ್ವರ ಮತ್ತು ಶೀತದ ಪ್ರಕರಣಗಳು ಹೆಚ್ಚುತ್ತವೆ. ಅದಕ್ಕೆ ವೈರಾಣು ಕಾರಣ. ವೈರಾಣು ಆಗಾಗ ತನ್ನ ಗುಣಲಕ್ಷಣಗಳನ್ನು ಬದಲಾಯಿಸುತ್ತಿರುತ್ತದೆ. ಈ ಬಾರಿ ಅದಕ್ಕೆ ಎಚ್​ಎಂಪಿವಿ ( ಹ್ಯೂಮನ್ ಮೆಟಾನ್ಯುಮೊವೈರಸ್) ಎಂದು ಹೆಸರಿಡಲಾಗಿದೆ. ಇದು ಖಂಡಿತವಾಗಿಯೂ ಅಪಾಯಕಾರಿ ವೈರಸ್ ಅಲ್ಲ. ಜ್ವರ, ಶೀತ ಇತ್ತೀಚೆಗೆ ಬಂದವರಿಗೆ ಎಚ್​ಎಂಪಿ ಬಂದುಹೋಗಿರಬಹುದು. ಪರೀಕ್ಷೆ ಮಾಡದೆ ಇರುವುದರಿಂದ ಗೊತ್ತಾಗಿರುವುದಿಲ್ಲ. ಇದು ಸಾಮಾನ್ಯ ವೈರಸ್ ಆಗಿದ್ದು, ಕಾಳಜಿ ವಹಿಸಿದರೆ ಸಾಕು. ಅಷ್ಟಕ್ಕೂ, ಇದು ಹೊಸ ವೈರಸ್ ಏನಲ್ಲ. ಭಾರತ ಸೇರಿದಂತೆ ಹಲವು ದೇಶಗಳ ಜನರಲ್ಲಿ ಈ ಹಿಂದೆಯೇ ಕಾಣಿಸಿಕೊಂಡಿರುವ ವೈರಸ್ ಇದು. ವೈರಸ್ ಎದುರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಸೂಕ್ತ ಸಲಹೆ, ಸೂಚನೆಗಳನ್ನು ಸೋಮವಾರ ಬಿಡುಗಡೆ ಮಾಡಿದೆ.

ಏನಿದು ಎಚ್​ಎಂಪಿ ವೈರಸ್?

ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್​ಎಂಪಿವಿ) ಉಸಿರಾಟಕ್ಕೆ ಸಂಬಂಧಿಸಿದ ವೈರಾಣು. ಇದು ಆರಂಭದಲ್ಲಿ ಸೌಮ್ಯ ಮತ್ತು ಮಧ್ಯಮ ಬಗೆಯ ಜ್ವರದ ಲಕ್ಷಣವನ್ನು ಹೊಂದಿರುತ್ತದೆ. ಈ ವೈರಾಣು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು

ಕೆಮ್ಮು, ಶೀತ, ಗಂಟಲು ನೋವು, ಉರು ಕಟ್ಟಿದಂತಾಗುವುದು, ಉಸಿರಾಡಲು ತೊಂದರೆ.

ಚೀನಾ ಸ್ಪಷ್ಟನೆ

ತನ್ನ ದೇಶದಲ್ಲಿ ಜನರಿಗೆ ಶೀತ, ಜ್ವರ, ಉಸಿರಾಟದ ಸಮಸ್ಯೆ, ಕೆಮ್ಮು ಸಾಂಕ್ರಾಮಿಕವಾಗಿ ಹರಡಿ, ಜನರು ಆಸ್ಪತ್ರೆಗೆ ದಾಖಲಾಗುತ್ತಿರುವ ವರದಿಗಳನ್ನು ಚೀನಾ ಸರ್ಕಾರ ಅಲ್ಲಗಳೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಚಳಿಗಾಲದಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣ ಕಡಿಮೆಯಾಗಿವೆ. ವಿದೇಶಿಯರು ಚೀನಾಕ್ಕೆ ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ. ಆದಾಗ್ಯೂ, ಎಚ್​ಎಂಪಿ ವಿರುದ್ಧ ಹೋರಾಡಲು ಚೀನಾದ ಆರೋಗ್ಯ ಇಲಾಖೆ ಕೆಲ ಮಾರ್ಗಸೂಚಿ ಜಾರಿಗೊಳಿಸಿದೆ. ಆದರೆ, ‘ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸಿಲ್ಲ. ಆದರೆ, ಕೆಲ ಮೂಲಗಳ ಪ್ರಕಾರ, ಚೀನಾ ನೈಜ ಪರಿಸ್ಥಿತಿಯನ್ನು ಮುಚ್ಚಿಡುತ್ತಿದೆ. ಅಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್​ಗಳೂ ಸಿಗುತ್ತಿಲ್ಲ. ಕೋವಿಡ್ ಸಮಯದಲ್ಲೂ ಚೀನಾ ಸುಳ್ಳು ಹೇಳಿ ಜಗತ್ತಿನ ದಾರಿ ತಪ್ಪಿಸಿತ್ತು. ಈ ಬಾರಿಯೂ ಹಾಗೇ ಮಾಡುತ್ತಿದೆ. ಹಾಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಕೂಡಲೇ ಮಧ್ಯಪವೇಶಿಸಿ ಚೀನಾದಲ್ಲಿನ ಪರಿಸ್ಥಿತಿಯನ್ನು ಸ್ಪಷ್ಟಪಡಿಸಬೇಕು ಎಂಬ ಆಗ್ರಹಗಳೂ ಕೇಳಿಬಂದಿವೆ.

ಸಾಂಕ್ರಾಮಿಕ ಕಾಯಿಲೆಯ ಭೀತಿ?

ಎಚ್​ಎಂಪಿ ಮೂಲಕ ಸಾಂಕ್ರಾಮಿಕ ಕಾಯಿಲೆ ಕೋವಿಡ್​ನಂತೆ ಜಗತ್ತಿನಾದ್ಯಂತ ಹರಡಲಿದೆಯೇ ಎಂಬ ಆತಂಕ ಶುರುವಾಗಿದೆ. ಆದರೆ, ವೈದ್ಯರ ಪ್ರಕಾರ, ಕರೊನಾ ಹೊಸ ವೈರಸ್ ಆಗಿದ್ದರಿಂದ ಅದನ್ನು ನಿಯಂತ್ರಿಸುವುದು ಮತ್ತು ಚಿಕಿತ್ಸೆ ನೀಡುವುದು ಸವಾಲಾಗಿ ಪರಿಣಮಿಸಿತು. ಈಗಿನ ಸ್ಥಿತಿಯನ್ನು ಅವಲೋಕಿಸಿದರೆ ಎಚ್​ಎಂಪಿ ವಿಶ್ವಾದ್ಯಂತ ಹರಡಿಕೊಳ್ಳುವ ಸಾಧ್ಯತೆ ಕಡಿಮೆ. ಚಳಿಯ ತೀವ್ರತೆ ಹೆಚ್ಚಿದಾಗ ಮಾತ್ರ ಈ ವೈರಾಣು ಕಾಣಿಸಿಕೊಳ್ಳುತ್ತದೆ.

ವೈರಾಣು ಹೇಗೆ ಹರಡುತ್ತದೆ?

  • ಸೀನುವುದರಿಂದ
  • ಕೆಮ್ಮವುದರಿಂದ
  • ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬರುವುದರಿಂದ.
  • ಸೋಂಕಿತ ವ್ಯಕ್ತಿ ಬಳಸಿದ ವಸ್ತುಗಳನ್ನು ರ್ಸ³ಸುವುದರಿಂದ.
  • ಸೋಂಕು ದೇಹದೊಳಗೆ ಪ್ರವೇಶಿಸಿದ ಮೂರರಿಂದ ಐದು ದಿನಗಳ ಬಳಿಕ ಎಚ್​ಎಂಪಿವಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಯಾರು ಹೆಚ್ಚು ಕಾಳಜಿ ವಹಿಸಬೇಕು?

  • 5 ವರ್ಷದೊಳಗಿನ ಮಕ್ಕಳು.
  • 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು.
  • ನ್ಯುಮೋನಿಯಾ, ಅಸ್ತಮಾ ರೋಗಿಗಳು ಮತ್ತು ಉಸಿರಾಟ ಸಂಬಂಧಿ ಇತರ ಕಾಯಿಲೆಯಿಂದ ಬಳಲುತ್ತಿರುವವರು.
  • ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರು.
  • ತೀವ್ರ ಜ್ವರ ಹಾಗೂ ಶೀತದಿಂದ ಬಳಲುತ್ತಿರುವವರು.

ಷೇರು ಮಾರುಕಟ್ಟೆಯನ್ನೇ ಬೀಳಿಸಿತು!

ದೇಶದಲ್ಲಿ ಎಚ್​ಎಂಪಿ ವೈರಸ್ ಹರಡುವ ಭೀತಿ, ಮೂರನೇ ತ್ರೖೆಮಾಸಿಕದ ಗಳಿಕೆಯ ಆತಂಕ ಮತ್ತು ವಿದೇಶಿ ಹೂಡಿಕೆಯ ಹೊರ ಹರಿವಿನ ನಿರಂತರತೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಸೋಮವಾರ ಭಾರಿ ಪ್ರಮಾಣದಲ್ಲಿ ಕುಸಿಯಿತು. ಸೆನ್ಸೆಕ್ಸ್ 1258 ಅಂಕ ಕುಸಿದು 77,964ಕ್ಕೆ ತಲುಪಿತು. 3,474 ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದರೆ, 656 ಕಂಪನಿಗಳ ಷೇರುಗಳು ಮಾತ್ರ ಲಾಭ ಕಂಡವು. ನಿಫ್ಟಿ 388 ಅಂಕ ಕುಸಿದು 23,616ಕ್ಕೆ ಮುಟ್ಟಿತು. ಹೂಡಿಕೆದಾರರಿಗೆ ಒಂದೇ ದಿನ 10.98 ಲಕ್ಷ ಕೋಟಿ ರೂ. ನಷ್ಟವಾಯಿತು.

ಏನು ಮಾಡಬೇಕು?

  • ಸ್ವಚ್ಛತೆಗೆ ಆದ್ಯತೆ ಇರಲಿ. ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಸ್ಯಾನಿಟೈಜರ್​ನಿಂದ ಆಗಾಗ ತೊಳೆಯುತ್ತಿರಿ.
  • ಸೀನುವಾಗ, ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್​ನಿಂದ ಮುಚ್ಚಿಕೊಳ್ಳಿ.
  • ಜ್ವರ, ಕೆಮ್ಮು, ಶೀತ ಅಥವಾ ಗಂಟಲು ನೋವು ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ. ಜನಸಂಪರ್ಕವನ್ನು ತಪ್ಪಿಸಿ.
  • ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯಲ್ಲೇ ಇರಿ, ಕುಟುಂಬದ ಇತರ ಸದಸ್ಯರೊಂದಿಗೆ ಸಂಪರ್ಕವನ್ನು ಮಿತಗೊಳಿಸಿ.
  • ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ಸೂಕ್ತ ವಿಶ್ರಾಂತಿ ಪಡೆಯಿರಿ.
  • ಸಮೀಪದ ವೈದ್ಯರನ್ನು ಸಂರ್ಪಸಿ, ಚಿಕಿತ್ಸೆ ಪಡೆದುಕೊಳ್ಳಿ.
  • ಮನೆಯಲ್ಲಿ ಚಿಕ್ಕಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಹೆಚ್ಚು ಕಾಳಜಿ ವಹಿಸಿ.

ಏನು ಮಾಡಬಾರದು?

  • ಜನಸಂದಣಿ ಇರುವ ಸ್ಥಳಗಳಲ್ಲಿ ಸಂಚಾರ ಬೇಡ.
  • ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಸೇರಿದಂತೆ ಇತರ ಅಶುಚಿ ಮಾಡಬೇಡಿ.
  • ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ ಸ್ಪರ್ಶಿಸಬೇಡಿ
  • ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ ಬೇಡ. ಟವೆಲ್ ಅಥವಾ ಹೊದಿಕೆ ಇತ್ಯಾದಿ ಹಂಚಿಕೊಳ್ಳುವುದನ್ನು ತಪ್ಪಿಸಿ.
  • ಕರ್ಚಿಫ್ ಮತ್ತು ಟಿಶ್ಯೂ ಪೇಪರ್​ನ ಮರುಬಳಕೆ ಬೇಡ.
  • ಸ್ವಯಂಚಿಕಿತ್ಸೆ ಬೇಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net