ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕನ ಹತ್ಯೆ: 3 ದಿನದಲ್ಲಿ 2ನೇ ಕೊಲೆ, ರಾಜಕೀಯ ವೈಷಮ್ಯದ ಶಂಕೆ! Trinamool leader

Trinamool leader
Published on

Trinamool leader: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಪಿಯೂಷ್ ಘೋಷ್ ಅವರನ್ನು ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಿರ್ಭುಮ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಪಕ್ಷದ ಸೈಂಥಿಯಾ ಪಂಚಾಯತ್ ಸಮಿತಿಯ ಕೃಷಿ ಅಧಿಕಾರಿ ಮತ್ತು ಶ್ರೀನಿಧಿಪುರ ಪ್ರದೇಶದ ಅಧ್ಯಕ್ಷರಾಗಿ ಘೋಷ್ ಕಾರ್ಯ ನಿರ್ವಹಿಸುತ್ತಿದ್ದರು. ದುಷ್ಕರ್ಮಿಗಳು ಅವರ ತಲೆಗೆ ಗುಂಡು ಹಾರಿಸಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಭಾಂಗರ್‌ನಲ್ಲಿ ಟಿಎಂಸಿ ನಾಯಕನ ಹತ್ಯೆಯಾದ ಕೆಲವೇ ದಿನಗಳಲ್ಲಿ ಘೋಷ್ ಹತ್ಯೆ ನಡೆದಿದ್ದು, ಮೂರು ದಿನಗಳಲ್ಲಿ ನಡೆದ ಎರಡನೇ ರಾಜಕೀಯ ಹತ್ಯೆ ಇದಾಗಿದೆ. ಆರಂಭಿಕ ವರದಿಗಳ ಪ್ರಕಾರ, ಮಧ್ಯರಾತ್ರಿಯ ಸುಮಾರಿಗೆ ಘೋಷ್‌ಗೆ ಫೋನ್ ಕರೆ ಬಂದಿತು. ಅವರು ಕೊಮಾರ್‌ಪುರ ಇಂಟರ್​ಸೆಕ್ಸನ್​ ಸಮೀಪಿಸುತ್ತಿದ್ದಂತೆ, ದುಷ್ಕರ್ಮಿಗಳು ಅವರ ತಲೆಗೆ ಗುಂಡು ಹಾರಿಸಿ, ಹತ್ಯೆಗೈದಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಬೋಲ್ಪುರ ಉಪಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಲವಪುರ ಶಾಸಕ ಅಭಿಜಿತ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಘೋಷ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಹತ್ಯೆಯನ್ನು ಖಂಡಿಸಿದ ಸಿಂಗ್, ಇದು ತುಂಬಾ ದುಃಖಕರ ಘಟನೆ, ನಮ್ಮ ಪಕ್ಷದ ನಾಯಕನನ್ನು ಅವರ ಮನೆಯಿಂದ ಕರೆಸಿ ಗುಂಡಿಕ್ಕಿ ಕೊಲ್ಲಲಾಗಿದ್ದು, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕೆಂದು ಅವರು ಒತ್ತಾಯಿಸಿದರು.

ಬಿರ್ಭುಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮನ್‌ದೀಪ್ ಸಿಂಗ್ ಮಾತನಾಡಿ, ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಘಟನೆಗೆ ಕುರಿತು ಪ್ರತಿಕ್ರಿಯೆ ನೀಡಿದ ದುಬ್ರಾಜ್‌ಪುರ ಬಿಜೆಪಿ ಶಾಸಕ ಅನುಪ್ ಸಹಾ, ಕಳೆದ ಅನೇಕ ವರ್ಷಗಳಿಂದ ಪಶ್ಚಿಮ ಬಂಗಾಳದಲ್ಲಿ ಹಲವಾರು ಕೊಲೆಗಳು ನಡೆದಿವೆ. ಅದು ಸಾಮಾನ್ಯ ಜನರಾಗಿರಲಿ ಅಥವಾ ಟಿಎಂಸಿ ನಾಯಕರಾಗಿರಲಿ, ಇದಕ್ಕೆ ಮಮತಾ ಬ್ಯಾನರ್ಜಿಯೇ ಹೊಣೆಗಾರರು. ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net