ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ: ಫುಟ್​ಪಾತ್​ ಮೇಲೆ ಮಲಗಿದ್ದ ಐವರು ದುರ್ಮರಣ! Audi Driver

Audi Driver
Published on

Audi Driver : ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಬಿಳಿ ಬಣ್ಣದ ಆಡಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದ ಪರಿಣಾಮ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ಐವರು ಮಂದಿ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ನೈಋತ್ಯ ದೆಹಲಿಯ ವಸಂತ ವಿಹಾರ್‌ನ ಶಿವ ಕ್ಯಾಂಪ್ ಬಳಿ ನಡೆದಿದೆ.

ದಂಪತಿಗಳಿಬ್ಬರು ಸಹಿತ ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಬುಧವಾರ (ಜುಲೈ 9) ಬೆಳಗಿನ ಜಾವ 1.45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶನಿವಾರ (ಜುಲೈ 12) ದೃಢಪಡಿಸಿದ್ದಾರೆ.

ದ್ವಾರಕಾ ನಗರದ ನಿವಾಸಿ 40 ವರ್ಷದ ಉತ್ಸವ್ ಶೇಖರ್ ಎಂಬ ಆರೋಪಿಯನ್ನು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬಂಧಿಸಿದ್ದಾರೆ. ಅಪಘಾತ ನಡೆದ ಸಂದರ್ಭದಲ್ಲಿ ಆತ ಮದ್ಯದ ಅಮಲಿನಲ್ಲಿದ್ದ ಎನ್ನುವುದನ್ನು ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ.

ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪುವ ವೇಳೆಗೆ ಗಾಯಗೊಂಡ ಐವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಲಾಧಿ (40 ವರ್ಷ), ಬಿಮ್ಲಾ (8 ವರ್ಷ), ಸಬಾಮಿ (45 ವರ್ಷ), ನಾರಾಯಣಿ (35 ವರ್ಷ) ಮತ್ತು ರಾಮಚಂದರ್ (45 ವರ್ಷ)ಮೃತಪಟ್ಟಿದ್ದಾರೆ. ಮೃತರು ರಾಜಸ್ಥಾನದ ನಿವಾಸಿಗಳಾಗಿದ್ದು, ಶಿವ ಕ್ಯಾಂಪ್ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದಾಗ ಕಾರು ಅವರ ಮೇಲೆ ಹರಿದಿದೆ.

ಪ್ರಾಥಮಿಕ ತನಿಖೆ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಪಾದಚಾರಿ ಮಾರ್ಗದಲ್ಲಿ ಐವರು ಮಲಗಿದ್ದಾಗ ಬಿಳಿ ಆಡಿ ಕಾರು ಹರಿದಿದೆ. ಶೇಖರ್ ಅವರನ್ನು ಸ್ಥಳದಲ್ಲೇ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ANI ಗೆ ಮಾಹಿತಿ ನೀಡಿದ್ದಾರೆ. ಅಪಘಾತದ ನಂತರ ಮೃತರ ಕಂಬಳಿಗಳು, ಪಾದಚಾರಿ ಮಾರ್ಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪ್ರಸ್ತುತ ತನಿಖೆ ನಡೆಯುತ್ತಿದ್ದು, ಚಾಲಕ ಶೇಖರ್ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net