ಕಾಶ್ಮೀರ: ಮತ್ತೊಬ್ಬ ನಾಗರೀಕನ ಹತ್ಯೆಗೆ ಸಜ್ಜಾಗಿದ್ದ ಉಗ್ರನ ಅಂತ್ಯ

jk
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ಮತ್ತೊಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿವೆ. ಕಳೆದ ದಿನಗಳಲ್ಲಿ ರಾಜ್ಯದಲ್ಲಿ ನಡೆದ ಕಾರ್ಮಿಕರಿಬ್ಬರ ಕೊಲೆಗೆ ಸಹಕಾರಿಯಾಗಿದ್ದ ಈತ, ಸ್ಥಳೀಯ ಅಂಗಡಿ ಮಾಲೀಕನೊಬ್ಬನನ್ನು ಹತ್ಯೆ ಮಾಡುವ ಹುನ್ನಾರದಲ್ಲಿದ್ದ ಎನ್ನಲಾಗಿದೆ.

"ಮೃತ ದುಷ್ಕರ್ಮಿಯನ್ನು ಕುಲ್ಗಾಂ ಜಿಲ್ಲೆಯ ಜಾವೆದ್​ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ. ಇವನು ಅ.20 ರಂದು ಹತ್ಯೆಗೊಳಗಾದ ಗುಲ್​ಜಾರ್​ ಎಂಬ ಉಗ್ರನಿಗೆ ಬಿಹಾರದ ಇಬ್ಬರು ಕಾರ್ಮಿಕರ ಹತ್ಯೆಯಲ್ಲಿ ಸಹಾಯ ಮಾಡಿದ್ದ. ಬಾರಾಮುಲ್ಲಾದ ಒಬ್ಬ ಅಂಗಡಿಯವನನ್ನು ಕೊಲ್ಲುವ ಮಿಷನ್​ ಮೇಲಿದ್ದ" ಎಂದು ಕಾಶ್ಮೀರದ ಐಜಿಪಿ ವಿಜಯ್​ ಕುಮಾರ್​ ಹೇಳಿದ್ದಾರೆ.

ರಾಜ್ಯದಲ್ಲಿ ನಡೆದ ನಾಗರೀಕರ ಹತ್ಯೆಗಳಿಗೆ ಸಂಬಂಧಿಸಿದಂತೆ, ಕಳೆದ ವಾರ, ಇಬ್ಬರು ಲಷ್ಕರ್​ ಐ ತೇಬಾ ಉಗ್ರರನ್ನು ಕುಲ್ಗಾಂ ಪೊಲೀಸರು ಸಾಯಿಸಿದ್ದರು. ಅವರ ಬಳಿಯಿಂದ ಸಿಕ್ಕ ದಾಖಲಾತಿಗಳ ಆಧಾರದ ಮೇಲೆ ಜಾವೆದ್​​ ವಾನಿಯ ಮಾಹಿತಿ ಲಭ್ಯವಾಗಿ ಅವನನ್ನು ಬಂಧಿಸಲು ಮುಂದಾಗಿದ್ದರು. ಆದರೆ, ಹಲವು ಉಗ್ರರು ಚೆರ್​ದರಿಯಲ್ಲಿ ಆರ್ಮಿ ಮತ್ತು ಪೊಲೀಸ್​ ಅಧಿಕಾರಿಗಳ ವಿರುದ್ಧ ಗುಂಡು ಹಾರಿಸಿದರು. ಇದಕ್ಕೆ ಉತ್ತರವಾಗಿ ಪೊಲೀಸರು ಹಾರಿಸಿದ ಗುಂಡಿಗೆ ವಾನಿ ತುತ್ತಾದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಿಂದ ಒಂದು ಪಿಸ್ತೋಲ್​, ಒಂದು ಲೋಡೆಡ್​ ಮ್ಯಾಗಜೀನ್ ಮತ್ತು ಒಂದು ಪಾಕಿಸ್ತಾನಿ ಗ್ರೆನೇಡ್​ಅನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net