ಕರ್ನೂಲ್ ಬಸ್ ದುರಂತ: ಬೈಕ್​ಗೆ ಡಿಕ್ಕಿ ಹೊಡೆದಿಲ್ಲ... ಕೊನೆಗೂ ಪೊಲೀಸ್​ ತನಿಖೆಯಲ್ಲಿ ಅಸಲಿ ಕಾರಣ ಬಯಲು! Kurnool Bus Accident

Kurnool Bus Accident
Published on

Kurnool Bus Accident : ಕರ್ನೂಲ್ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಆರಂಭದಲ್ಲಿ ಬೈಕ್​ಗೆ ಬಸ್​ ಡಿಕ್ಕಿಯಾಗಿ ಅವಘಡ ಸಂಭವಿಸಿದೆ ಎಂದು ನಂಬಲಾಗಿತ್ತು. ಆದರೆ, ಪೊಲೀಸ್​ ತನಿಖೆಯಲ್ಲಿ ಬೇರೆ ಸಂಗತಿ ಬೆಳಕಿಗೆ ಬಂದಿದೆ. ಅದೇನೆಂದರೆ, ಬೈಕ್​ಗೆ ಮೊದಲೇ ಅಪಘಾತವಾಗಿತ್ತು. ಅದಾದ ನಂತರ ಬಸ್, ಬೈಕನ್ನು ಎಳೆದೊಯ್ದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಬಸ್​ ಅಪಘಾತಕ್ಕೂ ಮುನ್ನ, ಬೈಕ್ ಸವಾರ ಮತ್ತು ಇನ್ನೊಬ್ಬ ವ್ಯಕ್ತಿ ಪೆಟ್ರೋಲ್ ಪಂಪ್‌ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ವಿಡಿಯೋ ಬೆಳಕಿಗೆ ಬಂದಿತು. ಆ ಸಮಯದಲ್ಲಿ ಅವರಿಬ್ಬರು ಮದ್ಯದ ಅಮಲಿನಲ್ಲಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ತನಿಖೆ ನಡೆಸಿದ ಪೊಲೀಸರು ಬೈಕ್‌ನಿಂದ ಬಿದ್ದು ಸಾವಿಗೀಡಾದ ವ್ಯಕ್ತಿಯನ್ನು ಕರ್ನೂಲ್​ ಜಿಲ್ಲೆಯ ಪ್ರಜಾ ನಗರದ ನಿವಾಸಿ ಶಿವಶಂಕರ್ ಎಂದು ಗುರುತಿಸಿದ್ದಾರೆ.

ಶಿವಶಂಕರ್ ಜೊತೆ ಬೈಕ್‌ನಲ್ಲಿದ್ದ ಮತ್ತೊಬ್ಬ ಯುವಕನನ್ನು ಎರ್ರಿಸ್ವಾಮಿ ಎಂದು ಗುರುತಿಸಲಾಗಿದೆ. ಪೊಲೀಸರು ಎರ್ರಿಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತನ ಹೇಳಿಕೆ ಪ್ರಕಾರ, ಬೈಕ್​ಗೆ ಖಾಸಗಿ ಬಸ್​ ಡಿಕ್ಕಿ ಹೊಡೆದಿಲ್ಲ. ಮಧ್ಯರಾತ್ರಿ ಮಳೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ಶಂಕರ್ ಮತ್ತು ಎರ್ರಿಸ್ವಾಮಿ ಮದ್ಯದ ಅಮಲಿನಲ್ಲಿದ್ದರು ಎಂದು ವರದಿಯಾಗಿದೆ.

ಚಿನ್ನತೇಕೂರು ಬಳಿ ಬೈಕ್ ಸ್ಕಿಡ್ ಆಗಿ ಇಬ್ಬರೂ ಕೆಳಗೆ ಬಿದಿದ್ದಾರೆ. ಈ ವೇಳೆ ಬೈಕ್ ರಸ್ತೆಯ ಮಧ್ಯದಲ್ಲಿ ಬಿದ್ದಿದೆ. ಶಂಕರ್ ಮತ್ತು ಎರ್ರಿಸ್ವಾಮಿ ರಸ್ತೆಯ ಎರಡೂ ಬದಿಗೆ ಬಿದ್ದರು. ಈ ವೇಳೆ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಶಂಕರ್ ತಲೆಗೆ ತೀವ್ರ ಗಾಯಗಳಾಗಿ, ಸ್ಥಳದಲ್ಲೇ ಮೃತಪಟ್ಟನು. ಎರ್ರಿಸ್ವಾಮಿ ಹೆಸರಿನ ಮತ್ತೊಬ್ಬ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಈ ಘಟನೆ ನಡೆದ ಕೆಲವೇ ಸಮಯದಲ್ಲಿ ವೇಗವಾಗಿ ಬಂದ ಖಾಸಗಿ ಬಸ್ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಮೇಲೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ಬಳಿಕ ಬಸ್,​ ಬೈಕನ್ನು ಸುಮಾರು 300 ಮೀಟರ್‌ಗಳಷ್ಟು ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ಬೆಂಕಿ ಹರಡಿ ಬಸ್ ಸುಟ್ಟು ಭಸ್ಮವಾಯಿತು. ಬಸ್ ಅಪಘಾತದಿಂದ ಭಯಭೀತರಾದ ಎರ್ರಿಸ್ವಾಮಿ ಸ್ಥಳದಿಂದ ಪರಾರಿಯಾಗಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸೆಲ್‌ಫೋನ್ ಸಂಖ್ಯೆಗಳ ಆಧಾರದ ಮೇಲೆ ಪೊಲೀಸರು ಎರ್ರಿಸ್ವಾಮಿಯನ್ನು ಗುರುತಿಸಿ, ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಂದಹಾಗೆ, ನಿನ್ನೆ (ಅ.24) ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಈ ಘಟನೆ ನಡೆಯಿತು. ಅಪಘಾತಕ್ಕೀಡಾದ ಬಸ್​ನಲ್ಲಿ ಒಟ್ಟು 41 ಜನರಿದ್ದರು. ಅವರಲ್ಲಿ ಇಬ್ಬರು ಚಾಲಕರಿದ್ದರು. ಈ ವೇಳೆ 20 ಮಂದಿ ಮೃತಪಟ್ಟರೆ, 21 ಮಂದಿ ಪವಾಡಸದೃಶ ರೀತಿಯಲ್ಲಿ ಪಾರಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net