ಮತ್ತೊಂದು ಸುತ್ತಿನ ಪ್ಯಾಕೇಜ್ ನಿರೀಕ್ಷೆ: 1 ಲಕ್ಷ ರೂ. ಪರಿಹಾರ 2-3 ದಿನದಲ್ಲಿ ವಿತರಣೆ, ಬಸವರಾಜ ಬೊಮ್ಮಾಯಿ ಸುಳಿವು

Assembly
Published on

ಬೆಂಗಳೂರು: ಕರೊನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಇನ್ನು 2-3 ದಿನಗಳಲ್ಲೇ ತಲಾ ಒಂದು ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ಜತೆಗೆ ಕೋವಿಡ್​ನಿಂದ ಸಂಕಷ್ಟಕ್ಕೀಡಾದ ಕೆಲವು ವರ್ಗಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶವಿದ್ದು, ಕೆಲವೇ ದಿನಗಳಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತ ಚರ್ಚೆಯ ಕೊನೆಯಲ್ಲಿ ಉತ್ತರ ನೀಡಿದ ಸಿಎಂ, ಕರೊನಾದಿಂದ ಮೃತರಾದ ಬಿಪಿಎಲ್ ಕುಟುಂಬದ ಪೈಕಿ ಪ್ರಸ್ತುತ 7-8 ಸಾವಿರ ಕುಟುಂಬ ಮಾಹಿತಿ ನೋಂದಣಿಯಾಗಿದೆ. ಆ ಕುಟುಂಬಕ್ಕೆ ಮೊದಲ ಹಂತದಲ್ಲಿ ಪರಿಹಾರ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಚರ್ಚೆ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಪ್ರಸ್ತಾಪಿಸಿದ ಅಂಶವನ್ನು ಗಣನೆಗೆ ತೆಗೆದುಕೊಂಡ ಬಸವರಾಜ ಬೊಮ್ಮಾಯಿ, ಕೋವಿಡ್ ಎರಡನೇ ಅಲೆ ಕೊನೆ ಹಂತಕ್ಕೆ ಬಂದಿದ್ದು, ಆರ್ಥಿಕ ಚಟುವಟಿಕೆಗೆ ಚುರುಕು ನೀಡಬೇಕಿದೆ. ಇದರೊಟ್ಟಿಗೆ ಕೆಲವು ವರ್ಗಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶವಿದೆ ಎಂದರು. ಯಾವ ವರ್ಗಕ್ಕೆ ಪರಿಹಾರ ನೀಡಲಾಗುತ್ತದೆ ಎಂಬುದನ್ನು ಸಿಎಂ ಈ ವೇಳೆ ಸ್ಪಷ್ಟಪಡಿಸಿಲ್ಲ. ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, ಯಾವ ಸರ್ಕಾರವೂ ಬೆಲೆ ಏರಿಕೆಯನ್ನು ಬಯಸುವುದಿಲ್ಲ. ಎಷ್ಟೇ ಬೆಲೆ ಏರಿದರೂ ಪೆಟ್ರೋಲ್, ಡೀಸೆಲ್ ಸರಬರಾಜು ಮಾಡಬೇಕು. ಆರ್ಥಿಕ ಚಟುವಟಿಕೆಯ ಚಕ್ರ ತಿರುಗಲು ಇದು ಅನಿವಾರ್ಯ ಎಂದ ಅವರು ಇಂಧನ ಮೇಲಿನ ಅಬಕಾರಿ ಸುಂಕ ಕಡಿಮೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪೆಟ್ರೋಲ್ ಗುಣ ಹೊಂದಿರುವ ಎಥೆನಾಲ್ ಬಳಕೆ ಹೆಚ್ಚಾಗಬೇಕೆಂಬ ನಿಟ್ಟಿನಲ್ಲಿ ಎನ್​ಡಿಎ ಅವಧಿಯಲ್ಲಿ ಹೆಚ್ಚು ಪೋ›ತ್ಸಾಹ ನೀಡಲಾಗುತ್ತಿದೆ. ಎನ್​ಡಿಎ ಅವಧಿಗೆ ಮುನ್ನ ಶೇ.6 ಎಥೆನಾಲ್ ಬಳಕೆಗೆ ಅವಕಾಶವಿತ್ತು, ಅದನ್ನೀಗ ಶೇ.20ಕ್ಕೆ ಹೆಚ್ಚಿಸಲಾಗಿದೆ. ಹೊಸ ಹೊಸ ತಂತ್ರಜ್ಞಾನಗಳೂ ಸಹ ಬಂದಿವೆ ಎಂದು ವಿವರಿಸಿದರು.

ಸಿಎಂ ಭಾಷಣಕ್ಕೆ ಭೇಷ್ ಎಂದ ಬಿಎಸ್​ವೈ: ಬೆಲೆ ಏರಿಕೆ ಮೇಲಿನ ಚರ್ಚೆ ಕೊನೆಯಲ್ಲಿ ಬೊಮ್ಮಾಯಿ ಭಾಷಣಕ್ಕೆ ಆಡಳಿತ ಪಕ್ಷದ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರು. ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಗುತ್ತಾ ಕುಳಿತಿದ್ದರು. ಇದನ್ನು ಗಮನಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ನಗುತ್ತಿದ್ದಾರೆ. ಅವರು ನಗುವುದೇ ಅಪರೂಪ. ಬಹಳ ಸಂತೋಷ. ಬೊಮ್ಮಾಯಿ ಅವರ ಉತ್ತರ ಕೇಳಿ ಅವರಿಗೆ ನಗು ಬಂದಿದೆ ಎಂದು ಹಾಸ್ಯ ಮಾಡಿದರು. ಈ ವೇಳೆ ಮಾತು ಆರಂಭಿಸಿದ ಬಿಎಸ್​ವೈ, ಸಾಮಾನ್ಯವಾಗಿ ನಾನು ಮಾತನಾಡಲ್ಲ. ಇತ್ತೀಚಿನ ವರ್ಷಗಳಲ್ಲಿ ಒಬ್ಬ ಮುಖ್ಯಮಂತ್ರಿಯಾಗಿ ಇಷ್ಟೊಂದು ಒಳ್ಳೆಯ ರೀತಿ ಎಲ್ಲವನ್ನು ತಿಳಿದುಕೊಂಡು ಬಂದು ಸಮಗ್ರವಾಗಿ ಉತ್ತರ ಕೊಡುವ ಮೂಲಕ ಒಳ್ಳೆಯ ರೀತಿ ಬೊಮ್ಮಾಯಿ ಮಾತನಾಡಿದ್ದಾರೆ. ಬಹುಷಃ ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಒಳ್ಳೆಯ ಭಾಷಣ ಕೇಳಿರಲಿಲ್ಲ. ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.

ಮುದ್ರಾಂಕ ಶುಲ್ಕ ಶೀಘ್ರ ಪರಿಷ್ಕರಣೆ: ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಸೇರಿ ಸ್ಥಿರಾಸ್ತಿ ವಹಿವಾಟು ಹೆಚ್ಚಳ, ನಿರ್ಮಾಣ ಚಟುವಟಿಕೆಗಳಿಗೆ ಉತ್ತೇಜನ ನೀಡಲೆಂದು ಮಹಾರಾಷ್ಟ್ರ ಮಾದರಿಯಲ್ಲಿ ಹಲವು ಉಪಕ್ರಮಗಳಿಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು. ಮುದ್ರಾಂಕ ಶುಲ್ಕ ವಿನಾಯಿತಿ, ಮಾರ್ಗಸೂಚಿ ದರ ಪರಿಷ್ಕರಣೆ ಬಗ್ಗೆ ಸಮಾಲೋಚಿಸಿದ್ದು, ಸ್ಪಷ್ಟ ರೂಪ ನೀಡಿದ ಬಳಿಕ ಮುಖ್ಯಮಂತ್ರಿ ಒಪ್ಪಿಗೆ ಪಡೆದು ಮುಂದಿನ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಪರಸ್ಪರ ಲೂಟ್ ಆರೋಪ: ಬೆಲೆ ಏರಿಕೆ ವಿಷಯ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಉತ್ತರಿಸುತ್ತಿದ್ದಾಗ ಆಡಳಿತ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪರಸ್ಪರ ಲೂಟ್ ಆರೋಪದ ಘೊಷಣೆಗಳನ್ನು ಮೊಳಗಿಸಿದ ಪ್ರಸಂಗ ನಡೆಯಿತು. ಬೆಲೆ ಏರಿಕೆ ಕುರಿತು ಚರ್ಚೆಯ ಕೊನೆಯಲ್ಲಿ ಕಾಂಗ್ರೆಸ್ ಸಭ್ಯಾತ್ಯಾಗದೊಂದಿಗೆ ಚರ್ಚೆಗೆ ತೆರೆಬಿದ್ದಿತಾದರೂ ಅದಕ್ಕೂ ಮುನ್ನ ಎರಡೂ ಕಡೆಯ ಸದಸ್ಯರು ಏಕ ಕಾಲಕ್ಕೆ ಎದ್ದು ನಿಂತು ಪರಸ್ಪರ ಬೈಯ್ದಾಡಿಕೊಂಡರು. ಕಾಂಗ್ರೆಸ್ ಲೂಟ್ ಹಾಗೂ ಬಿಜೆಪಿ ಲೂಟ್ ಎಂದು ಕೂಗುತ್ತಿದ್ದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಬಿಜೆಪಿ ಲೂಟ್ ಎಂದು ಎತ್ತರದ ಧ್ವನಿಯಲ್ಲ ಹೇಳಿದರೆ, ಕಾಂಗ್ರೆಸ್ ಲೂಟ್ ಎಂದು ಬೊಮ್ಮಾಯಿ ಕೂಗಿದರು

ಸಿದ್ದು-ಡಿಕೆಶಿ ಕಾಲೆಳೆದ ಬೊಮ್ಮಾಯಿ: ಕಳೆದ ವಾರ ಕಾಂಗ್ರೆಸ್ ನಾಯಕರು ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸಿದ್ದನ್ನು ಪ್ರಸ್ತಾಪಿಸಿ ಬೊಮ್ಮಾಯಿ ಕಾಂಗ್ರೆಸ್ ನಾಯಕರನ್ನು ಕೆಣಕಿದರು. ‘ಕಾಂಗ್ರೆಸ್ ಪ್ರತಿಭಟನೆಯನ್ನು ನಾನು ನೋಡುತ್ತಿದೆ, ಹಗ್ಗ ಸಿದ್ದರಾಮಣ್ಣನ ಕೈಯಲ್ಲಿದ್ದರೆ, ಬಾರಕೋಲು ಡಿ.ಕೆ.ಶಿವಕುಮಾರ್ ಕೈಯಲ್ಲಿ. ಹೀಗಾಗಿ ಯಾವಾಗ ಹಗ್ಗ ಎಳೆಯುತ್ತಾರೋ ಆಗ ಅವರು ಚಾಟಿ ಹೊಡೆಯುತ್ತಾರೆ. ಆಗ ಎತ್ತು ಏನು ಮಾಡಬೇಕು’ ಎಂದು ಮಾರ್ವಿುಕವಾಗಿ ತಿವಿದರು. ‘ಇವರು ಹಗ್ಗದಿಂದ ಎತ್ತನ್ನು ಬಿಗಿ ಹಿಡಿಯುವುದು ಅವರು ಎತ್ತಿಗೆ ಹೊಡೆಯುವುದು. ಹೀಗಾದಾಗ ನಮ್ಮ ಕಡೆ ಹೂಟಾ ಹಾರುತ್ತದೆ ಅನ್ನುತ್ತಾರೆ, ನೇಗಿಲು ಎದ್ದುನಿಲ್ಲುತ್ತದೆ. ಪಾಪ ಅಂದು 3 ಜನ (ಶಾಸಕರು) ಬಿದ್ದರು ಎಂದು ಕಾಲೆಳೆದರು.

ವಿಜೃಂಭಿಸಿದ ಸಿಎಂ ಬೊಮ್ಮಾಯಿ: ಮುಖ್ಯಮಂತ್ರಿ ಆದ ಬಳಿಕ ಮೊದಲ ಅಧಿವೇಶನದಲ್ಲಿ ಚರ್ಚೆಗೆ ಮೊದಲ ಬಾರಿಗೆ ಉತ್ತರ ನೀಡಿದ ಬಸವರಾಜ ಬೊಮ್ಮಾಯಿ ಅವರ ಅನಿರೀಕ್ಷಿತ ದಾಳಿ ಪ್ರತಿಪಕ್ಷ ಸದಸ್ಯರನ್ನು ಮತ್ತೆಮತ್ತೆ ಕೆರಳುವಂತೆ ಮಾಡಿತು. ಬೆಲೆ ಏರಿಕೆ ಕುರಿತ ಚರ್ಚೆಗೆ ಉತ್ತರಿಸಿದ ಸಿಎಂ, ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಸಂಸದೀಯ ನಾಯಕನಂತೆ ಕಂಡು ವಿಜೃಂಭಿಸಿದ್ದು ವಿಶೇಷ ಸಂಗತಿಯಾಗಿತ್ತು. ಪ್ರತಿಪಕ್ಷವನ್ನು ಕೆಣಕುತ್ತಲೇ ಕೇಂದ್ರ ಸರ್ಕಾರದ ವಿವಿಧ ಸಾಧನೆಗಳ ವಿವರಣೆ ನೀಡುತ್ತಾ ಸಾಗಿದರು. ಜತೆಗೆ ಲಯಬದ್ಧವಾಗಿ ಛೇಡಿಸುತ್ತಲೇ ಗಮನ ಸೆಳೆದರು. ದೆಹಲಿ ಬಳಿ ಪಂಜಾಬ್ ಮತ್ತು ಹರಿಯಾಣ ರೈತರು ನಡೆಸಿರುವ ಚಳವಳಿಗೆ ರಾಜಕೀಯ ಹಿನ್ನೆಲೆಯಿದೆ. ಕಾಂಗ್ರೆಸ್ ಪ್ರಾಯೋಜಿತವೆಂದು ಬೊಮ್ಮಾಯಿ ಮಾಡಿದ ಆರೋಪ ಸ್ವಲ್ಪ ಹೊತ್ತು ಮಾತಿನ ಚಕಮಕಿ, ಗದ್ದಲಕ್ಕೆ ಕಾರಣವಾಯಿತು. ಪೆಟ್ರೋಲಿಯಂ ಉತ್ಪನ್ನಗಳು, ಆಹಾರಧಾನ್ಯ ಸೇರಿ ವಿವಿಧ ವಸ್ತುಗಳ ಬೆಲೆ ಏರಿಕೆಯ ಮೇಲೆ ನಡೆದ ಚರ್ಚೆಗೆ ಸಿಎಂ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಕಳೆದ 7 ವರ್ಷಗಳಲ್ಲಿ ವಿವಿಧ ತೆರಿಗೆಗಳ ಮೂಲಕ ಸಂಗ್ರಹಿಸಿದ 34 ಲಕ್ಷ ಕೋಟಿ ರೂ. ಆದಾಯದಲ್ಲಿ 13.83 ಲಕ್ಷ ಕೋಟಿ ರೂ. ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಗೋಧಿ, ಭತ್ತ, ರಾಗಿ, ಜೋಳ ಇನ್ನಿತರ ಉತ್ಪನ್ನಗಳ ಖರೀದಿ ಪ್ರಮಾಣವನ್ನು ಹೆಚ್ಚಿಸುವ ಜತೆಗೆ ದರವನ್ನು ಗಮನಾರ್ಹ ಪ್ರಮಾಣದಲ್ಲಿ ಏರಿಸಿದೆ ಎಂದರು. ಹಾಗಿದ್ದರೆ, ರೈತರು ಚಳವಳಿ ನಡೆಸುತ್ತಿರುವುದೇಕೆ? ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದಾಗ ಅದಕ್ಕೆ ರಾಜಕೀಯ ಹಿನ್ನೆಲೆಯಿದೆ, ಕಾಂಗ್ರೆಸ್ ಪ್ರಾಯೋಜಿತವೆಂದು ತಿರುಗೇಟು ನೀಡಿದರು. ಇದನ್ನು ಅಲ್ಲಗಳೆದ ಕಾಂಗ್ರೆಸ್ ಸದಸ್ಯರು ಒಟ್ಟಿಗೆ ಎದ್ದು ನಿಂತು ವಿರೋಧಿಸಿದಾಗ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಎದ್ದುನಿಂತು ಸಿಎಂ ಹೇಳಿಕೆ ಬೆಂಬಲಿಸಿದರು. ಪರಸ್ಪರ ಮಾತಿನ ಚಕಮಕಿಗೆ ಇಳಿದಿದ್ದರಿಂದ ಉಂಟಾದ ಗದ್ದಲದ ಮಧ್ಯೆ ಸಿಎಂ ಆದವರು ಇಂಥ ಹೇಳಿಕೆ ನೀಡಿ ರೈತರಿಗೆ ಅಪಮಾನಿಸುವುದು ಸರಿಯಲ್ಲ. ಕ್ಷಮೆಯಾಚಿಸಬೇಕೆಂದು ಡಿಕೆಶಿ ಆಗ್ರಹಿಸಿದರು.

ಸತ್ಯ ಹೇಳಲು ಹೆದರಿಕೆಯಿಲ್ಲ: ಕಾಂಗ್ರೆಸ್​ನ ರಮೇಶ್ ಕುಮಾರ್ ಮಾತನಾಡಿ, ರೈತರ ಚಳವಳಿಗೆ ಪ್ರಾಯೋಜಕತ್ವದ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ, ಯಾರ ಪ್ರಾಯೋಜಕತ್ವ ಎಂಬುದರ ವಿವರ ನೀಡಿ. ಹಿಂದೆಯೂ ವಿದೇಶಿ ಶಕ್ತಿಗಳು, ಹಲವು ಖಾಸಗಿ ಕಂಪನಿಗಳ ಕೈವಾಡದ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಈ ಮಾತು ಹೇಳುತ್ತಿದ್ದೇನೆಯೇ ಹೊರತು ವಿರೋಧಕ್ಕಲ್ಲವೆಂದರು. ಬೊಮ್ಮಾಯಿ ಪ್ರತ್ಯುತ್ತರಿಸಿ, ಎಲ್ಲ ಮಾಹಿತಿ ಗೊತ್ತಿದ್ದೇ ಪ್ರಾಯೋಜಕತ್ವದ ವಿಚಾರ ಪ್ರಸ್ತಾಪಿಸಿರುವೆ. ನೀವು (ರಮೇಶ್ ಕುಮಾರ್) ಏನು ಹೇಳಲು ಬಯಸಿದ್ದೀರಿ ಎನ್ನುವುದು ಅರ್ಥ ಆಗುತ್ತದೆ. ಸತ್ಯ ಹೇಳುವುದಕ್ಕೆ ಹೆದರಿಕೆಯಿಲ್ಲ ಎಂದರು.

ಕುಮಾರವ್ಯಾಸನ ಪದ್ಯದ ಮೇಲೆ ಗುದ್ದಾಟ

ಸಿದ್ದರಾಮಯ್ಯ ಹಾಗೂ ಬೊಮ್ಮಾಯಿ ನಡುವೆ ವಿಚಿತ್ರ ರೀತಿ ಹೊಯ್ದಾಟ ನಡೆದಿದ್ದಕ್ಕೆ ವಿಧಾನಸಭೆ ಸಾಕ್ಷಿಯಾಯಿತು.ಬೆಲೆ ಏರಿಕೆ ಕುರಿತ ಚರ್ಚೆಯ ಕೊನೆಯಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ, ಭಾಮಿನಿ ಷಟ್ಪದಿಯ ಸಾಲುಗಳನ್ನು ಉಲ್ಲೇಖಿಸಿದ್ದರು.

ಅರಸು ರಾಕ್ಷಸ ಮಂತ್ರಿಯೆಂಬುವ/ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು/ ಉರಿ ಉರಿವುತಿದೆ ದೇಶ ನಾವಿ/ ನ್ನಿರಲು ಬಾರದೆನುತ್ತ ಜನ ಬೇ/ ಸರದ ಬೇಗೆಯಲಿರದಲೇ ಭೂಪಾಲ ಕೇಳೆಂದ... (ರಾಜನೋ ರಾಕ್ಷಸ, ಇವನ ಮಂತ್ರಿಗಳೋ ಗರ್ಜಿಸುವ ಹುಲಿಗಳು, ಇವನ ಪರಿವಾರದವರು ಹದ್ದಿನ ಗುಂಫುಗಳು, ಹೀಗಿರುವಾಗ ಬಡವರ ನೋವನ್ನು ಆಲಿಸುವವರಾದರು ಯಾರು, ಅವರ ನೋವಿನ ಉರಿ ಜ್ವಾಲೆಯಾಗಿ ಉರಿಯುತ್ತಿರಲು ಅವರು ಈ ದೇಶದಲ್ಲಿರಬಾರದೆಂದು ಪ್ರಜೆಗಳು ಬೇಸರದ ಬೇಗೆಯಲ್ಲಿ ಬೇಯುತ್ತಿಲ್ಲ ತಾನೆ, ಎಂದು ನಾರದರು ಯುಧಿಷ್ಠಿರನನ್ನು ಕೇಳಿದರು.)

ತಾವೇನು ಕಡಿಮೆ ಇಲ್ಲ ಎಂಬಂತೆ ಸಿಎಂ ಸಿದ್ಧತೆ ಮಾಡಿಕೊಂಡು ಬಂದಿದ್ದರು. ಸ್ನೇಹಿತನ ನೆರವು ಪಡೆದಿದ್ದಾಗಿ ಹೇಳಿಕೊಂಡ ಬೊಮ್ಮಾಯಿ, ಕುಮಾರವ್ಯಾಸ ಪದ್ಯ ಹಾಗೂ ತಾತ್ಪರ್ಯವನ್ನು ಉಲ್ಲೇಖಿಸಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಮಾಲೆಗಾರ ಸಿಳೀಮುಖನ ಪಶು/ ಪಾಲಕನವೋಲ್ ಪ್ರಜೆಯ ರಕ್ಷಿಸಿ ಮೇಲೆ ತೆಗೆವೈ ಧನವನುಳಿದಂಗಾರಕಾರಕನ/ ವೋಲು ಕಡದುರು ವ್ಯಾಘ್ರನಂತೆ ವಿ/ ತಾಳಿಸಲು ಪ್ರಜೆ ನಸಿಯಲರಸಿನ/ ಬಾಳಿಕೆಗೆ ಸಂದೇಹವರಿಯಾ ರಾಯ ಕೇಳೆಂದ (ರಾಜನಾದವನು ಯಾವ ರೀತಿ ರಾಜ್ಯವನ್ನಾಳಬೇಕೆಂದು ಇಲ್ಲಿ ವಿವರಿಸಲಾಗಿದೆ. ವಿದುರನು ಮೂರು ಉದಾಹರಣೆಯನ್ನು ನೀಡಿ ಧೃತರಾಷ್ಟ್ರನಿಗೆ ತಿಳಿಸುತ್ತಾನೆ. ಯಾವ ರೀತಿ ಹೂವಾಡಿಗನು ಹೂವನ್ನು ಬಿಡಿಸಿ ಗಿಡವನ್ನು ರಕ್ಷಿಸುತ್ತಾನೆ. ದುಂಬಿಯು ಹೂವಿಗೆ ತೊಂದರೆ ಕೊಡದೆ ಹೂವಿನ ರಸವನ್ನು ಮಾತ್ರ ಹೀರಿತ್ತದೆ. ಪಶುಪಾಲಕನು ಗೋವನ್ನು ರಕ್ಷಿಸಿ ಅದರಿಂದ ಹಾಲನ್ನು ಮಾತ್ರ ಕರೆದುಕೊಳ್ಳುತ್ತಾನೆ. ಹಾಗೆಯೆ, ಪ್ರಜೆಗಳನ್ನು ರಕ್ಷಿಸಿ ತೆರಿಗೆಯನ್ನು ಸಂಗ್ರಹಿಸುವೆಯಾ? ಅಥವಾ, ಇದ್ದಿಲು ಮಾರುವವನು ಗಿಡವನ್ನೇ ಕಡಿದು ಸುಡುವಂತೆ, ಕಡಿಜೀರಗೆ ಹುಳುವು ಹೂವನ್ನೇ ಛಿದ್ರಿಸುವಂತೆ, ಹುಲಿಯು ಹಸುವನ್ನೇ ಕೊಲ್ಲುವಂತೆ ಪ್ರಜೆಗಳನ್ನು ನಡೆಸಿಕೊಳ್ಳುವೆಯಾ? ಉತ್ತರಾರ್ಧದಲ್ಲಿ ಹೇಳಿರುವ ರೀತಿ ನೀನು ಪ್ರಜೆಗಳನ್ನು ನಡೆಸಿಕೊಂಡರೆ ಪ್ರಜೆಗಳು ನಶಿಸಿ ಹೋಗಿ ರಾಜನ ಉಳಿವೇ ಸಂಶಯಕ್ಕೆ ಒಳಗಾಗುತ್ತದೆ.)

ಎಚ್​ಡಿಕೆ-ಸಿದ್ದು ಜಟಾಪಟಿ

ರಾಜ್ಯದಲ್ಲಿ 3 ವರ್ಷದಿಂದ ತಲೆದೋರಿರುವ ವಸತಿ ಸಮಸ್ಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ಲೇಷಣೆ, ನಾಲ್ಕು ದಿನಗಳ ತರುವಾಯ ವಿಧಾನಸಭೆಯಲ್ಲಿ ಅನುರಣಿಸಿತು. ವಸತಿ ಸಮಸ್ಯೆಯ ನೈಜ ಕಾರಣಗಳನ್ನು ದಾಖಲೆ ಸಹಿತ ಬಯಲಿಗೆಳೆಯಲು ಕುಮಾರಸ್ವಾಮಿ ಬಯಸಿದ್ದರು. ಹೀಗಾಗಿ ಮೂರು ವರ್ಷಗಳ ಸಮಸ್ಯೆಯ ವಾಸ್ತವಾಂಶಗಳನ್ನು ಸದನದ ಮುಂದಿಡಿ ಎಂದು ವಸತಿ ಸಚಿವರಿಗೆ ಒತ್ತಿ ಒತ್ತಿ ಹೇಳಿದರು. ಪ್ರಶ್ನೋತ್ತರ ವೇಳೆ ಶರತ್ ಬಚ್ಚೇಗೌಡ, ಮೂರು ವರ್ಷಗಳಿಂದ ಸರ್ಕಾರ ಮನೆಗಳನ್ನೇ ಕೊಟ್ಟಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ ಎಚ್​ಡಿಕೆ ಹೇಳಿಕೆ ಉಲ್ಲೇಖಿಸಿ, ದುಡ್ಡೇ ಇಟ್ಟಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಸರ್ಕಾರದಲ್ಲಿ ಎಷ್ಟು ಹಣ ಕೊಟ್ಟಿದ್ದೆವು ಎಂದು ಅಂಕಿ-ಸಂಖ್ಯೆ ನೀಡಿದ್ದಾರೆ. ಅದು ನಿಮ್ಮ ಸರ್ಕಾರ ಅಲ್ಲ, ಸಮ್ಮಿಶ್ರ ಸರ್ಕಾರ ಎಂದು ಎಚ್​ಡಿಕೆಯನ್ನು ತಿವಿದರು. ವಿಷಯ ಇಷ್ಟಕ್ಕೆ ಬಿಡದ ಎಚ್​ಡಿಕೆ, ನಾನು ಸಮ್ಮಿಶ್ರ ಸರ್ಕಾರ ಮುನ್ನಡೆಸುವಾಗ ಹಿಂದಿನ ಸರ್ಕಾರ ಕೊಟ್ಟ ಮನೆಗಳನ್ನು ಪೂರೈಸಲು 29,000 ಕೋಟಿ ರೂ. ಬೇಕಿತ್ತು. ಆದರೆ, ಹಿಂದಿನ ಸರ್ಕಾರ ಇಟ್ಟಿದ್ದು ಕೇವಲ 3,000 ಕೋಟಿ ರೂ. ಎಂದು ಸಿದ್ದರಾಮಯ್ಯರನ್ನು ಉದ್ದೇಶಿಸಿ ಹೇಳಿದರು. ಹಾಗೆಯೇ, ವಸತಿ ಸಚಿವರು ವಾಸ್ತವಾಂಶ ಇಡಲಿ. ಸದನದ ದಾರಿ ತಪ್ಪಿಸುವುದು ಬೇಡ, ಅವಾಸ್ತವವಾದ ಅಂಶಗಳನ್ನು ನಾನು ಹೇಳುತ್ತಿಲ್ಲ ಎಂದ ಅವರು, ಯಾವುದೇ ಸರ್ಕಾರ ಮಾಡಿಕೊಂಡ ಕಮಿಟ್​ವೆುಂಟ್ ಅನ್ನು ಮುಂದಿನ ಸರ್ಕಾರ ಬಂದಾಗ ಅದನ್ನು ಪೂರೈಸುವುದು ಜವಾಬ್ದಾರಿ. ಮೂರು ವರ್ಷದಿಂದ ಮನೆ ಕೊಡಲು ಏಕೆ ಆಗಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net