

ಬೆಂಗಳೂರು: ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಮತ್ತೊಬ್ಬ ಇನ್‌ಸ್ಪೆಕ್ಟರ್ ಚಂದ್ರಾಧರ ಅವರನ್ನು ಬಂಧಿಸಿದೆ.
ಈ ಹಿಂದೆ ಯಲಹಂಕದ ಪೊಲೀಸ್ ತರಬೇತಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಿಟ್ ಕಾಯಿನ್ ಹಗರಣದಲ್ಲಿ ಇವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಲಾಗಿತ್ತು. ಪ್ರಕರಣದಲ್ಲಿ ಚಂದ್ರಾಧರ ಪಾತ್ರ ಇರುವ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ್ದ ಎಸ್‌ಐಟಿ ಬುಧವಾರ ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿ 5 ದಿನಗಳ ಕಾಲ ಕಸ್ಟಡಿಗೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಟ್ ಕಾಯಿನ್ ಸಂಬಂಧ 2020ರಲ್ಲಿ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಸಿಸಿಬಿಯ ಅಂದಿನ ತನಿಖಾಧಿಕಾರಿಗಳಾಗಿದ್ದ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತಯ್ಯ, ಶ್ರೀಧರ್ ಪೂಜಾರ್, ಪ್ರಶಾಂತ್ ಬಾಬು ಹಾಗೂ ಸೈಬರ್ ಠಾಣೆ ಇನ್‌ಸ್ಪೆಕ್ಟರ್ ಚಂದ್ರಾಧರ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್ ಖಂಡೇವಾಲಾ, ಸಂತೋಷ್ ಎಂಬುವವರನ್ನು ಬಂಧಿಸಿದ್ದರು.
ವಿಚಾರಣೆ ನೆಪದಲ್ಲಿ ಆರೋಪಿ ಶ್ರೀಕಿಯನ್ನು ಪೊಲೀಸರು ಸಂತೋಷ್ ಮಾಲೀಕತ್ವದ ಜಿಸಿಐಡಿ ಟೆಕ್ನಾಲಜಿಸ್ ಕಂಪನಿಗೆ ಕರೆದೊಯ್ದು ಕ್ರಿಪ್ರೋ ವ್ಯಾಲೆಟ್‌ಗಳನ್ನು ಅನಧಿಕೃತವಾಗಿ ಹ್ಯಾಕ್ ಮಾಡಿ ಭಾರೀ ಮೌಲ್ಯದ ಬಿಟ್ ಕಾಯಿನ್‌ಗಳನ್ನು ವರ್ಗಾವಣೆ ಮಾಡಿಕೊಂಡಿದ್ದರು.
ಅಲ್ಲದೆ, ವಿವಿಧ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿಸಿ ಲಕ್ಷಾಂತರ ರೂ. ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಡಿಜಿಟೆಲ್ ಸಾಕ್ಷ್ಯಗಳನ್ನು ತಿರುಚಿ ಮತ್ತು ನಾಶಪಡಿಸಿದ ಆರೋಪವೂ ಕೇಳಿ ಬಂದಿತ್ತು.