ರಾಜಸ್ಥಾನ ರಾಜಕೀಯದಲ್ಲಿ ಮತ್ತೊಂದು ಸಂಚಲನ; ಬಿಎಸ್​ಪಿಯ 6 ಶಾಸಕರಿಗೆ ಹೈಕೋರ್ಟ್​ ನೋಟಿಸ್​

rajasthan vidhana sabha
Published on

ನವದೆಹಲಿ: ರಾಜಸ್ಥಾನದ ರಾಜಕೀಯ ವಲಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್​ನಲ್ಲಿ ಪಕ್ಷವನ್ನು ವಿಲೀನಗೊಳಿಸಿದ ಬಿಎಸ್​ಪಿಯ ಶಾಸಕರ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ರಿಟ್​ ಪಿಟೀಷನ್​ ವಿಚಾರಣೆ ಆರಂಭಿಸಿರುವ ರಾಜಸ್ಥಾನ ಹೈಕೋರ್ಟ್​ ಬಿಎಸ್​ಪಿಯ 6 ಶಾಸಕರು ಮತ್ತು ರಾಜಸ್ಥಾನದ ವಿಧಾನಸಭಾಧ್ಯಕ್ಷರಿಗೆ ನೋಟಿಸ್​ ಜಾರಿ ಮಾಡಿದೆ.

ಬಿಜೆಪಿಯ ಶಾಸಕ ಮದನ್​ ದಿಲ್ವಾರ್​ ಎಂಬುವರು ಬಿಎಸ್​ಪಿಯನ್ನು ಕಾಂಗ್ರೆಸ್​ನಲ್ಲಿ ವಿಲೀನಗೊಳಿಸಿದ ಕ್ರಮವನ್ನು ಪ್ರಶ್ನಿಸಿ ವಿಧಾನಸಭಾಧ್ಯಕ್ಷರಿಗೆ 2020ರ ಮಾರ್ಚ್​ನಲ್ಲಿ ದೂರು ಕೊಟ್ಟಿದ್ದರು. ಆದರೆ, ವಿಧಾನಸಭಾಧ್ಯಕ್ಷ ಸಿ.ಪಿ. ಜೋಷಿ ಜು.24ರಂದು ಈ ದೂರನ್ನು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮದನ್​ ದಿಲ್ವಾರ್​ ಸ್ಪೀಕರ್​ ಅವರ ಕ್ರಮವನ್ನು ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ತಿರಸ್ಕರಿಸುವ ಮುನ್ನ ವಿಧಾನಸಭಾಧ್ಯಕ್ಷರು ತಮ್ಮನ್ನು ಕರೆದು ವಿಚಾರಣೆ ನಡೆಸಲಿಲ್ಲ ಎಂದು ರಿಟ್​ ಅರ್ಜಿಯಲ್ಲಿ ಮmದನ್​ ದಿಲ್ವಾರ್​ ಆರೋಪಿಸಿದ್ದರು. ನ್ಯಾಯಮೂರ್ತಿ ಮಹೇಂದ್ರ ಕುಮಾರ್​ ಗೋಯಲ್​ ಅವರಿದ್ದ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ಆರಂಭಿಸಿದೆ. ಹಾಗೂ ಕಾಂಗ್ರೆಸ್​ನಲ್ಲಿ ತಮ್ಮ ಪಕ್ಷವನ್ನು ವಿಲೀನಗೊಳಿಸಲು ನಿರ್ಧರಿಸಿದ ಬಿಎಸ್​ಪಿಯ 6 ಶಾಸಕರು ಹಾಗೂ ವಿಧಾನಸಭಾಧ್ಯಕ್ಷರಿಗೆ ಈ ಬಗ್ಗೆ ಆ.11ರೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ ನ್ಯಾಯಪೀಠ ನೋಟಿಸ್​ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನದ ಸಾರಿಗೆ ಸಚಿವ ಪ್ರತಾಪ್​ ಖಚಾರಿಯವಾಸ್​, ವಿಧಾನಸಭಾಧ್ಯಕ್ಷರಿಗೆ ಹೈಕೋರ್ಟ್​ ನೋಟಿಸ್​ ಜಾರಿ ಮಾಡಲು ಬರುವುದಿಲ್ಲ. ಆದರೂ, ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ವಿಧಾನಸಭಾಧ್ಯಕ್ಷರಿಗೆ ಇರುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net