

ಬೆಂಗಳೂರು: ಪುತ್ರನಿಗೆ ಸ್ನಾನ ಮಾಡಿಸುವಾಗ ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಮೃತಪಟ್ಟು, ಮಗ ಅಸ್ವಸ್ಥಗೊಂಡಿರುವ ಘಟನೆ ಸದಾಶಿವನಗರದಲ್ಲಿ ನಡೆದಿತ್ತು. ಇದೀಗ ಅಂಥದೇ ಮತ್ತೊಂದು ಘಟನೆ ನಡೆದಿದೆ.
ಸ್ನಾನ ಮಾಡುವಾಗ ಯುವತಿಯೊಬ್ಬಳು ಕುಸಿದು ಬಿದ್ದು ಅಸ್ವಸ್ಥಳಾಗಿ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಹೌಸಿಂಗ್‌ಬೋರ್ಡ್ ನಿವಾಸಿ ರಾಜೇಶ್ವರಿ(೨೩) ಮೃತ ಯುವತಿ. ಡಿ.೨೦ರಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಿ.ಕಾಂ ಪದವಿ ವ್ಯಾಸಂಗ ಮಾಡಿದ್ದ ರಾಜೇಶ್ವರಿ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಬಂಧಿಕರೊಬ್ಬರ ಮದುವೆ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಹಾಕಿಕೊಂಡಿದ್ದರು. ಡಿ.೨೦ರಂದು ಮಧ್ಯಾಹ್ನ ಸ್ನಾನ ಮಾಡಲು ಬಾತ್ ರೂಮ್‌ಗೆ ತೆರಳಿದ್ದಾರೆ. ೨೦ ನಿಮಿಷ ಕಳೆದರೂ ಬಾತ್ ರೂಮ್‌ನಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾಗೊಂಡು ಕುಟುಂಬದ ಸದಸ್ಯರು ಬಾತ್ ರೂಮ್ ಬಳಿ ತೆರಳಿ ನೋಡಿದಾಗ, ರಾಜೇಶ್ವರಿ ಅಸ್ವಸ್ಥರಾಗಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ರಾಜೇಶ್ವರಿ ಮೃತಪಟ್ಟಿರುವುದಾಗಿ ಧೃಢಪಡಿಸಿದ್ದಾರೆ. ವಿಷಯ ತಿಳಿದು ಪೊಲೀಸರು ಮೃತಳ ಮನೆಗೆ ತೆರಳಿ ಪರಿಶೀಲಿಸಿದ್ದಾರೆ.
ಬಾತ್ ರೂಮ್‌ನಲ್ಲಿ ಸ್ನಾನ ಮಾಡುವಾಗ ಗ್ಯಾಸ್ ಗೀಸರ್‌ನಿಂದ ಸೋರಿಕೆಯಾದ ವಿಷಾನೀಲ ಸೇವಿಸಿ ರಾಜೇಶ್ವರಿ ಅಸ್ವಸ್ಥಳಾಗಿ ಮೃತಪಟ್ಟಿದ್ದಾಳೆ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.